ಹುಬ್ಬಳ್ಳಿ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಮಾದಕ ವಸ್ತುಗಳ ಹಾವಳಿ ನಿಯಂತ್ರಿಸುವಲ್ಲಿ ವಿಫಲವಾಗಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಜನರ ಗಮನ ಬೇರೆಡೆ ಸೆಳೆಯುವುದಕ್ಕಾಗಿ ಆರ್ಎಸ್ಎಸ್ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಎಸ್ಎಸ್ ಕುರಿತು ಗೃಹ ಸಚಿವರ ಹೇಳಿಕೆಗಳಿಗೆ ಹೆಚ್ಚು ಮಹತ್ವ ನೀಡುವ ಅಗತ್ಯ ಇಲ್ಲ ಎಂದರು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆಯಿಲ್ ಕಂಪನಿಗಳು ವಿದೇಶದಿಂದ ಎಥೆನಾಲ್ ಆಮದು ಮಾಡಿಕೊಳ್ಳುವುದನ್ನು ತಡೆದಿದೆ. ಇದನ್ನು ಸಚಿವ ಸಂತೋಷ ಲಾಡ್ ಅವರು ತಿಳಿದುಕೊಂಡು ಮಾತನಾಡಲಿ ಎಂದು ಹೇಳಿದರು.
ಸಚಿವ ಸಂತೋಷ ಲಾಡ್ ವಿದ್ಯಾವಂತ ರಾಜಕಾರಣಿ. ಅವರಿಗೆ ರಾಜ್ಯ ಅಷ್ಟೇ ಅಲ್ಲದೇ ಜಗತ್ತಿನ ಆಗುಹೋಗುವ ವಿಷಯಗಳ ಬಗ್ಗೆಯೂ ಪರಿಜ್ಞಾನ ಇದೆ. ಅಂಥವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಥೆನಾಲ್ ಆಮದಿನ ಬಗ್ಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ ಎಂಬ ಪರಿಜ್ಞಾನವೂ ಇಲ್ಲವೇ ? ಎಂದು ಟೀಕಿಸಿದರು.
ಕೆಲವು ಕಂಪನಿಗಳು ಎಥೆನಾಲ್ ಅನ್ನು ಆಮದು ಮಾಡಿಕೊಳ್ಳುತ್ತವೆ. ಇನ್ನುಳಿದಂತೆ ಸಕ್ಕರೆ, ಗೋವಿನಜೋಳ, ಅಕ್ಕಿ ಸೇರಿದಂತೆ ಇನ್ನಿತರ ವಸ್ತುಗಳಿಂದ ಉತ್ಪಾದಿಸುವ ಎಥೆನಾಲ್ ದೇಶದಲ್ಲಿ ಬಳಕೆಯಾಗುತ್ತದೆ ಎಂದರು.
ಸಚಿವ ಸಂತೋಷ ಲಾಡ್ ಅವರು ತಪು್ಪ ಮಾಹಿತಿಯನ್ನು ನೀಡುವ ಮೂಲಕ ಜನರನ್ನು ತಪು್ಪ ದಾರಿಗೆ ಎಳೆಯುತ್ತಿದ್ದಾರೆ. ರಾಜ್ಯ ಸರ್ಕಾರ ಮಾಡದ ಜವಾಬ್ದಾರಿ ಬಗ್ಗೆ ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಸಚಿವರಿಗೆ ತಿಳಿವಳಿಕೆ ನೀಡುವ ಕೆಲಸವನ್ನು ಸಚಿವ ಲಾಡ್ ಮಾಡಲಿ ಎಂದು ಹೇಳಿದರು.
ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 110.71 ರೂ. ಇದೆ. ಆದರೆ, ಇದರ ಮೂಲ ಬೆಲೆ ಪ್ರತಿ ಲೀಟರ್ಗೆ 96.54 ರೂ. ಇದರಲ್ಲಿ ಕೇಂದ್ರ ಸರ್ಕಾರದ ಸುಂಕ 11.90 ರೂ., ಪೆಟ್ರೋಲ್ ಬಂಕ್ನವರು 3.80 ರೂ. ಪ್ರತಿ ಲೀಟರ್ಗೆ ತಮ್ಮ ಕಮೀಷನ್ ಪಡೆಯುತ್ತಾರೆ. ರಾಜ್ಯ ಸರ್ಕಾರ 25.44 ರೂ. ವ್ಯಾಟ್ ವಿಧಿಸುತ್ತದೆ. ಇದರಲ್ಲಿ 11.90 ರೂ.ಗಳನ್ನು ಕೇಂದ್ರ ಸರ್ಕಾರ ಸಿಆರ್ಎಫ್ ಮೂಲಕ ಮರಳಿ ರಾಜ್ಯಕ್ಕೆ ನೀಡುತ್ತದೆ. ಸಚಿವ ಸಂತೋಷ ಲಾಡ್ ಅವರು ಇಂಧನ ಮೇಲೆ ರಾಜ್ಯ ಸರ್ಕಾರ ವಿಧಿಸುವ ವ್ಯಾಟ್ ಅನ್ನು ಕಡಿಮೆ ಮಾಡುವಂತೆ ತಮ್ಮ ಸರ್ಕಾರಕ್ಕೆ ಹೇಳಲಿ ಎಂದು ಒತ್ತಾಯಿಸಿದರು.
ಅಕ್ಕಿ, ಕಬ್ಬು, ಗೋವಿನಜೋಳ ಸೇರಿ ವಿವಿಧ ಉತ್ಪನ್ನಗಳಿಂದ ಎಥೆನಾಲ್ ಉತ್ಪತ್ತಿಯಾಗುತ್ತದೆ. ಪ್ರತಿ ಲೀಟರ್ ಎಥೆನಾಲ್ಗೆ ಅಂದಾಜು 66 ರೂ. ಅನ್ನು ಕಂಪನಿಗಳು ನೀಡಿ, ಖರೀದಿ ಮಾಡುತ್ತವೆ ಎಂದರು.
ಭಾರತದಲ್ಲಿಯೇ ಸಾಕಷ್ಟು ಎಥೆನಾಲ್ ಉತ್ಪತ್ತಿಯಾಗುತ್ತಿದ್ದರೂ, ಕಾಂಗ್ರೆಸ್ ನೇತೃತ್ವದ ಸರ್ಕಾರ ವಿದೇಶದಿಂದ ಎಥೆನಾಲ್ ಖರೀದಿ ಮಾಡುತ್ತಿತ್ತು. 2013ರಲ್ಲಿ ಅಂದಿನ ಕೇಂದ್ರ ಸರ್ಕಾರ 82 ಕೋಟಿ ಲೀಟರ್ ಎಥೆನಾಲ್ ಖರೀದಿಸಲು ಜಾಗತಿಕ ಟೆಂಡರ್ ಕರೆದಿತ್ತು. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಟೆಂಡರ್ ರದ್ದುಗೊಳಿಸಿತು ಎಂದು ತಿಳಿಸಿದರು.
ರಾಜ್ಯ ಸರ್ಕಾರ ಶುಗರ್ ಪ್ಯಾಕ್ಟರಿಗಳಿಂದ ವಿದ್ಯುತ್ ಖರೀದಿಸಬೇಕು. ಆದರೆ, ಕಾಂಗ್ರೆಸ್ ಸರ್ಕಾರ ಕೈಗಾರಿಕೆಗಳಿಗೆ ತೊಂದರೆ ಮಾಡುತ್ತಿದೆ ಹಾಗೂ ರೈತರನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಸಿದ್ಧಾಂತ ವಿರೋಧಿಸಿಲ್ಲ : ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬಿಜೆಪಿಯ ತತ್ವ, ಸಿದ್ಧಾಂತಗಳಿಗೆ ವಿರೋಧ ಇಲ್ಲ. ಆದರೆ, ವೈಯಕ್ತಿಕವಾಗಿ ಕೆಲವರನ್ನು ವಿರೋಧಿಸುತ್ತ ಬಂದಿದ್ದಾರೆ ಎಂದು ಅರವಿಂದ ಬೆಲ್ಲದ ಹೇಳಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಈಗ ಮೌನವಾಗಿದ್ದಾರೆ. ಯತ್ನಾಳ ಹಾಗೂ ಮಾಜಿ ಡಿಸಿಎಂ ಈಶ್ವರಪ್ಪ ಬಿಜೆಪಿಯವರೇ. ಪಕ್ಷ ಬಿಟ್ಟು ಹೋದವರನ್ನು ಕರೆದುಕೊಂಡು ಹೋಗಬೇಕು. ಅವರು ಪಕ್ಷಕ್ಕೆ ವಾಪಸ್ಸಾಗುವ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.
ಬಿಜೆಪಿ ಧಾರವಾಡ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ಪ್ರಮೋದ ಕೆ. ಹಾಗೂ ರಾಜು ಕೋರ್ಯಾಣಮಠ ಸುದ್ದಿಗೋಷ್ಠಿಯಲ್ಲಿ ಇದ್ದರು.