ಧಾರವಾಡ: ಖರೀದಿ ಕೇಂದ್ರದಲ್ಲಿ ಕಡಲೆ ಖರೀದಿಯನ್ನು ಚೀಲ ಇಲ್ಲ ಎಂಬ ಕ್ಷುಲ್ಲಕ ಕಾರಣ ನೀಡಿ ಸ್ಥಗಿತಗೊಳಿಸಿರುವುದನ್ನು ಈ ಕೂಡಲೇ ಪ್ರಾರಂಭಿಸಲು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಧಾರವಾಡ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.
ಈ ಬಾರಿ ಜಿಲ್ಲೆಯಾದ್ಯಂತ ಕಡಲೆ ಬೆಳೆಯನ್ನು ಬೆಳೆದ ರೈತರು -ಫೆಬ್ರವರಿ ತಿಂಗಳಲ್ಲೇ ಖರೀದಿ ಕೇಂದ್ರಗಳಲ್ಲಿ ಹೆಸರನ್ನು ನೋಂದಾಯಿಸಿದ್ದಾರೆ. ಖರೀದಿಯನ್ನು ಮಾರ್ಚ್ ತಿಂಗಳಲ್ಲೇ ಪ್ರಾರಂಭ ಮಾಡಿದ್ದರೂ ಕಳೆದ ಎರಡು ತಿಂಗಳಲ್ಲಿ ಮೂರು ಬಾರಿ ಖರೀದಿಯನ್ನು ಚೀಲ ಇಲ್ಲ ಎನ್ನುವ ಕುಂಟು ನೆಪ ಮಾಡಿ ಸ್ಥಗಿತಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಖರೀದಿ ಕೇಂದ್ರದಲ್ಲಿ ಕಡಲೆಯನ್ನು ಖರೀದಿ ಮಾಡಬೇಕು. ನೋಂದಣಿ ಮಾಡಿಸಿದ ರೈತರಿಗೆ ಪಾಳಿ ಪ್ರಕಾರ ಕಡಲೆ ಖರೀದಿ ಮಾಡಬೇಕು. ನೋಂದಾಯಿಸಿದ ಎಲ್ಲ ರೈತರ ಬೆಳೆಯನ್ನು ಖರೀದಿಸಬೇಕು. ಈಗಾಗಲೇ ಖರೀದಿ ಮಾಡಿರುವ ಕಡಲೆ ಬೆಳೆಯ ಹಣವನ್ನು ಕೂಡಲೇ ರೈತರ ಖಾತೆಗೆ ಜಮೆ ಮಾಡಬೇಕು. ಖರೀದಿಯ ಕೊನೆಯ ದಿನಾಂಕ ವಿಸ್ತರಿಸಬೇಕು ಎಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರಿಗೆ ಮನವಿ ಸಲ್ಲಿಸಲಾಯಿಸಲಾಯಿತು.