ಹುಬ್ಬಳ್ಳಿಯ ದಿ ಎಸ್‌ಎಸ್‌ಕೆ (ssk) ಕೋಆಪ್ ಬ್ಯಾಂಕ್ ನಿಯಮಿತ ಕಚೇರಿಯಲ್ಲಿ ಸೋಮವಾರ 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
Published on:
Copied
Follow Us
ಹುಬ್ಬಳ್ಳಿ: ದೇಶದ ಜಿಡಿಪಿಯಲ್ಲಿ ಸಹಕಾರಿ ಸಂಘಗಳ ಕೊಡುಗೆ ಅಪಾರವಿದೆ ಎಂದು ವಿಜಯಾನಂದ ಟ್ರಾವೆಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಶಿವಾ ಆನಂದ ಸಂಕೇಶ್ವರ ಅಭಿಪ್ರಾಯಪಟ್ಟರು.
ಇಲ್ಲಿಯ ದಾಜಿಬಾನಪೇಟೆಯ ದಿ ಎಸ್‌ಎಸ್‌ಕೆ (ssk) ಕೋಆಪ್ ಬ್ಯಾಂಕ್ ನಿಯಮಿತ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ನೂತನ ಸೇವೆಗಳು ಹಾಗೂ 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳ ಸೇವಾ ಕಾರ್ಯದ ಮಧ್ಯೆ ಕೋಆಪರೇಟಿವ್ ಸೊಸೈಟಿಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಇದಕ್ಕೆ ಕಾರಣ ಸೊಸೈಟಿಗಳು ಅಳವಡಿಸಿಕೊಂಡಿರುವ ಆರ್ಥಿಕ ಶಿಸ್ತು. ಗ್ರಾಹಕರು, ಷೇರುದಾರರು ಹಾಗೂ ಆಡಳಿತ ಮಂಡಳಿ ಕಾರ್ಯವೈಖರಿ ಕಾರಣ ಎಂದರು.
ಹು-ಧಾ ಮಹಾನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಶಾಲ ಅಬ್ಬಯ್ಯ ಮಾತನಾಡಿ, ಒಂದು ಸಮಾಜ ಅಭಿವೃದ್ಧಿಯಾಗಿದೆ ಎಂಬುದನ್ನು ಅರಿಯಬೇಕಾದರೆ, ಅವರಲ್ಲಿನ ಶಿಕ್ಷಣ ಮತ್ತು ಆರ್ಥಿಕ ಭದ್ರತೆ ತಿಳಿದುಕೊಳ್ಳಬೇಕು. ಎಸ್‌ಎಸ್‌ಕೆ ಸಮಾಜವು ಈ ನಿಟ್ಟಿನಲ್ಲಿ ವಿಜಯ ಸಾಧಿಸುತ್ತಿದೆ. ಬ್ಯಾಂಕ್‌ವತಿಯಿಂದ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಟ್ಟರೆ, ಅವರೆಲ್ಲರೂ ಓದಿ ಇನ್ನಷ್ಟು ಸಮಾಜವನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತದೆ ಎಂದರು.
ಬ್ಯಾಂಕ್ ಅಧ್ಯಕ್ಷ ವಿಠ್ಠಲ ಲದ್ವಾ ಪ್ರಾಸ್ತಾವಿಕವಾಗಿ ಮಾತನಾಡಿ, 1921ರಲ್ಲಿ ನಮ್ಮ ಬ್ಯಾಂಕ್ ಆರಂಭವಾಯಿತು. ಈಗ 58.12 ಕೋಟಿ ರೂ. ದುಡಿಯುವ ಬಂಡವಾಳವನ್ನು ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರ ಜತೆಗೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ಮಾರ್ಪಾಟುಗಳನ್ನು ಮಾಡಲಾಗುತ್ತಿದೆ ಎಂದರು.
ಮಾಜಿ ಶಾಸಕ ಅಶೋಕ ಕಾಟವೆ ಮಾತನಾಡಿದರು. ಇದೇ ವೇಳೆ ತೆರವಾದ ಸ್ಥಾನಕ್ಕೆ ಅನಂತಸಾ ಬದ್ದಿ ಅವರನ್ನು ನೂತನ ನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು. ನೂತನ ಆ್ಯಪ್, ಕ್ಯಾಲೆಂಡರ್ ಸೇರಿದಂತೆ ಬ್ಯಾಂಕ್‌ಗೆ ಸಂಬಂಧಿಸಿದ ನೂತನ ಸೇವೆಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಬ್ಯಾಂಕ್‌ನ ವೈಸ್ ಚೇರ್ಮನ್ ನಾರಾಯಣಸಾ ಜರತಾರಘರ, ಪ್ರಮುಖರಾದ ದೀಪಕ ಮಗಜಿಕೊಂಡಿ, ನಾರಾಯಣ ಖೋಡೆ, ಪ್ರಕಾಶ ಬುರಬುರೆ, ಸರಳಾ ಭಾಂಡಗೆ, ಸೀಮಾ ಲದ್ವಾ, ಕಾಶಿನಾಥ ವಾಳ್ವೇಕರ, ಅರುಣ ಇರಕಲ್, ಇತರರು ಇದ್ದರು.