ಶ್ರೀರಾಮಸೇನೆಯಿಂದ ತನಿಖೆಗೆ ಆಗ್ರಹ

ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ರವಾನೆ
ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ರವಾನೆ
Published on
ಧಾರವಾಡ: ಹುಬ್ಬಳ್ಳಿ ಹಳೇ ಕೋರ್ಟ್ ವೃತ್ತದ ಬಳಿಯ ಶಿರಡಿ ಸಾಯಿಬಾಬಾ ಮಂದಿರದಲ್ಲಿ ನಡೆಯುತ್ತಿರುವ ಅವ್ಯವಹಾರ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಅವರ ನೇತೃತ್ವದಲ್ಲಿ ಮಂದಿರ ಸಂರಕ್ಷಣಾ ಸಮಿತಿಯಿಂದ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರ ಮೂಲಕ ಶುಕ್ರವಾರ ಸರ್ಕಾರಕ್ಕೆ ಮನವಿ ರವಾನಿಸಿದರು.
ದೇವಸ್ಥಾನದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಈ ಕುರಿತು ಈಗಾಗಲೇ ಮನವಿ ಸಲ್ಲಿಸಿದರೂ ಕ್ರಮವಾಗಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ನ್ಯಾಯಾಧಿಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪದಾಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ರಾಜು ನಾಯಕವಾಡಿ, ಸಾಯಿಕುಮಾರ್ ಎಂ.ಎಸ್., ಆನಂದ ದಲಬಂಜನ, ಆನಂದ ಲದ್ವಾ, ಗೋವಿಂದ ಮುನವಳ್ಳಿ, ಸುನಿಲ್ ಕುಂಬಾರ, ಅಣ್ಣಪ್ಪ ದಿವಟಗಿ ಇತರರಿದ್ದರು.
ಧರಣಿ ನಡೆಸುತ್ತೇವೆ:
ಹುಬ್ಬಳ್ಳಿ ಶಿರಡಿ ಶ್ರೀ ಸಾಯಿಬಾಬಾ ಮಂದಿರದಲ್ಲಿ ನಡೆದ ಅವ್ಯವಹಾರದ ತನಿಖೆ ನಡೆಸಲು ವಿಳಂಬ ಮಾಡಿದರೆ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ಎದುರು ಹಾಗೂ ಸಾಯಿ ಬಾಬಾ ಮಂದಿರದ ಎದುರು ಧರಣಿ ನಡೆಸಲಾಗುವುದು ಎಂದು ಪ್ರಮೋದ ಮುತಾಲಿಕ ಹೇಳಿದರು.
ನಗರದಲ್ಲಿ ಶುಕ್ರವಾರ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಸ್ಥಾನದಲ್ಲಿ ಅವ್ಯವಹಾರದ ದಾಖಲೆಗಳನ್ನು ಎರಡು ತಿಂಗಳ ಹಿಂದೆ ಸಂಬಧಪಟ್ಟ ಅಧಿಕಾರಿಗಳಿಗೆ ನೀಡಲಾಗಿದೆ. ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನ ನಡೆದಿದೆ. ಯಾವ ತನಿಖೆ ಮಾಡಿಸಿದರೂ ನಮಗೇನೂ ಆಗುವುದಿಲ್ಲ ಎಂದು ಆಡಳಿತ ಮಂಡಳಿಯವರು ಸೊಕ್ಕಿನಿಂದ ಮಾತನಾಡುತ್ತಿದ್ದಾರೆ. ಇಂತಹ ಭಂಡತನದಿದಾಗಿಯೇ ಮಂದಿರ ಹಳ್ಳ ಹಿಡಿದು ಹೋಗಿದೆ. ನಾವು ಅವ್ಯವಹಾರಕ್ಕೆ ಅವಕಾಶ ನೀಡುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಹೋರಾಟ ಕೈ ಬಿಡುವುದಿಲ್ಲ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net