great ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಅಖಿಲ ಭಾರತ ಗಾಣಿಗರ ಸಂಘದ ಕೇಂದ್ರ ಘಟಕದ ವಾರ್ಷಿಕ ಮಹಾಸಭೆಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕೇಂದ್ರ ಸಚಿವ ಜೋಶಿ ಅಭಿಮತ
ಸಮಾಜದ ಹಿರಿಯರ ಶ್ರಮ ಸಹ ಸಾಕಷ್ಟು ಇದೆ.
ಎಣ್ಣೆ ಕಾಳುಗಳ ಉತ್ಪಾದನೆ ಹೆಚ್ಚಿಸುವ ಅಗತ್ಯ ಇದೆ.
ಹುಬ್ಬಳ್ಳಿ:
ನಗರದಲ್ಲಿ ಶನಿವಾರ ಆಯೋಜಿಸಿದ್ದ ಅಖಿಲ ಭಾರತ ಗಾಣಿಗರ ಸಂಘದ ಕೇಂದ್ರ ಘಟಕದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಗಾಣಿಗೆ ಸಮಾಜದ ಸೇವೆಯನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ದೇಶದಲ್ಲಿ ಎಣ್ಣೆ ಕಾಳುಗಳ ಉತ್ಪಾದನೆ ಹೆಚ್ಚಿಸುವ ಅಗತ್ಯ ಇದೆ. ಗಾಣಿಗ ಸಮಾಜ ನನ್ನ ರಾಜಕೀಯ ಜೀವನದಲ್ಲಿ ಸದಾ ಬೆಂಬಲ ನೀಡಿದೆ ಎಂದು ಹೇಳಿದರು.
ಹರಪ್ಪ, ಮೆಹಂಜೋದಾರೊ ನಾಗರಿಕತೆಯಲ್ಲಿಯೇ ಎಣ್ಣೆ ಉತ್ಪಾದನೆ ಮತ್ತು ಗಾಣಿಗ ವೃತ್ತಿಯ ಉಲ್ಲೇಖಗಳು ದೊರೆಯುತ್ತವೆ. ಗಾಣಿಗ ಸಮುದಾಯದ ಇತಿಹಾಸ ಸಾವಿರಾರು ವರ್ಷಗಳಷ್ಟು ಹಳೆಯದ್ದು ಎಂದರು.
ಒಂದು ಕಾಲದಲ್ಲಿ ಭಾರತದಿಂದ ಎಳ್ಳಿನ ಎಣ್ಣೆ ಸೇರಿದಂತೆ ವಿವಿಧ ತೈಲ ಉತ್ಪನ್ನಗಳಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆ ಇತ್ತು.
ಹಾಗಾಗಿ, ಎಣ್ಣೆ ಕಾಳುಗಳ ರಫ್ತು ಅಧಿಕವಾಗಿತ್ತು. ಆದರೆ, ಇದೀಗ ಶೇ. 60ರಷ್ಟು ಅಡುಗೆ ಎಣ್ಣೆ ಆಮದು ಮಾಡಿಕೊಳ್ಳಲಾಗುತ್ತಿದೆ. ರೈತರು ಎಣ್ಣೆ ಕಾಳುಗಳನ್ನು ಬೆಳೆಯಲು ಆಸಕ್ತಿ ತೋರಬೇಕಿದೆ ಎಂದು ಹೇಳಿದರು.
ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಗಾಣಿಗ ವೃತ್ತಿ ಸಂಕಷ್ಟದಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಗಾಣದ ಕೆಲಸ ನಿಂತಿದೆ. ಗಾಣಿಗರ ಅಭಿವೃದ್ಧಿ ನಿಗಮದ ಹೋರಾಟ ಅರ್ಧಕ್ಕೆ ನಿಂತಿದ್ದು, ಅದನ್ನು ಮುಂದುವರೆಸಬೇಕಿದೆ ಎಂದರು.
ಸಂಸದ ಪಿ.ಸಿ. ಗದ್ದಿಗೌಡ್ರ ಮಾತನಾಡಿ, ಹಿರಿಯರು ಕಟ್ಟಿರುವ ಸಮಾಜದ ಸಂಸ್ಥೆ ಬೆಳೆಸಿಕೊಂಡು ಹೋಗಬೇಕು. ಸಮಾಜದ ಹಿರಿಯರ ಶ್ರಮ ಸಹ ಸಾಕಷ್ಟು ಇದೆ. ಎಲ್ಲ ರಾಜಕೀಯ ಪಕ್ಷದ ಮುಖಂಡರು ಸಮಾಜಕ್ಕೆ ನೆರವಾಗಿದ್ದಾರೆ ಎಂದು ಹೇಳಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಗಾಣಿಗ ಸಮಾಜದ ವಸತಿ ನಿಲಯ ನಿಮಾಣಕ್ಕೆ ಸಹಾಯ ಮಾಡುವುದಾಗಿ ಘೋಷಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಗೌರವಾಧ್ಯಕ್ಷ ಡಾ. ಶೇಖರ ಸಜ್ಜನ ಮಾತನಾಡಿದರು. ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಗಾಣಿಗ ನೌಕರರ ಸಂಘದ ಮಹಾಪೋಷಕ ತಿಪ್ಪಣ್ಣ ಮಜ್ಜಗಿ, ಸಂಘದ ಅಧ್ಯಕ್ಷ ಗುರಣ್ಣ ಗೋಡಿ ಇದ್ದರು.