Skin disease: ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಚರ್ಮಬಾಧೆ!

Skin disease: ಕುಂದಗೋಳ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್. ವಿದ್ಯಾರ್ಥಿಗಳ ದೇಹದಲ್ಲಿ ಗುಳ್ಳೆ ಎದ್ದಿರುವುದು.
Skin disease: ಕುಂದಗೋಳ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್. ವಿದ್ಯಾರ್ಥಿಗಳ ದೇಹದಲ್ಲಿ ಗುಳ್ಳೆ ಎದ್ದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕುಂದಗೋಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಅವ್ಯವಸ್ಥೆ
  • ಕಲುಷಿತ ನೀರಿನ ಪರಿಣಾಮ
  • ವ್ಯಾಸಂಗದ ಮೇಲೆ ವ್ಯತಿರಿಕ್ತ ಪರಿಣಾಮ
  • ಮಕ್ಕಳನ್ನು ಹಾಸ್ಟೆಲ್‌ನಿಂದ ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ ಪಾಲಕರು
ನಾಗರಾಜ ಕುಂಕೂರ ಕುಂದಗೋಳ
ಪಟ್ಟಣದ ಸರ್ಕಾರಿ ವಸತಿ ನಿಲಯವು ಮಕ್ಕಳ ಪಾಲಿಗೆ ನರಕವಾಗಿ ಮಾರ್ಪಟ್ಟಿದೆ. ಕಲುಷಿತ (ಸವಳು) ನೀರಿನ ಪರಿಣಾಮ ಮಕ್ಕಳಲ್ಲಿ (Skin disease) ಚರ್ಮರೋಗ ಕಾಣಿಸಿಕೊಂಡಿದ್ದು, ವ್ಯಾಸಂಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಪಟ್ಟಣದ ಅಂಬೇಡ್ಕರ್ ನಗರದಲ್ಲಿದ್ದ ಮೆಟ್ರಿಕ್ ಪೂರ್ವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಾಲಕರ ಹಾಸ್ಟೆಲ್ ಕಟ್ಟಡದ ನಿರ್ವಹಣೆ ಕಾಮಗಾರಿ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳನ್ನು ಮೌನೇಶ್ವರ ಪ್ಲಾಟ್ ಬಳಿಯಿರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಕಟ್ಟಡಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಇಲ್ಲಿರುವ 55 ಮಕ್ಕಳ ಪೈಕಿ 20 ಮಕ್ಕಳಲ್ಲಿ ಕಳೆದ 45 ದಿನಗಳಿಂದ ದೇಹದ ವಿವಿಧ ಭಾಗದಲ್ಲಿ ಗುಳ್ಳೆಗಳು ಕಾಣಿಸಿಕೊಂಡಿದ್ದು ತೀವ್ರ ಬಾಧೆಪಡುತ್ತಿದ್ದಾರೆ. ಅಧಿಕಾರಿಗಳ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದ ಕೆಲ ಪಾಲಕರು ಮಕ್ಕಳನ್ನು ಹಾಸ್ಟೆಲ್‌ನಿಂದ ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ.
ಆರಂಭದಲ್ಲಿ ಬೆರಳೆಣಿಕೆಯಷ್ಟು ಮಕ್ಕಳಲ್ಲಿ ಕಾಣಿಸಿಕೊಂಡ ಸೋಂಕು ಇತರ ಮಕ್ಕಳಿಗೂ ಹರಡಿದ್ದು ಆರೋಗ್ಯವಂತ ವಿದ್ಯಾರ್ಥಿಗಳಿಗೂ ಆತಂಕ ಮೂಡಿಸಿದೆ. ಸ್ಥಳೀಯ ಆರೋಗ್ಯ ಇಲಾಖೆ ವೈದ್ಯರು ತಪಾಸಣೆ ನಡೆಸಿ ಔಷಧೋಪಚಾರ ನೀಡಿದರೂ ಯಾವುದೇ ಫಲಕಾರಿಯಾಗಿಲ್ಲ. ಹಾಸ್ಟೆಲ್‌ನಲ್ಲಿ ಶುದ್ಧ ನೀರಿನ ವ್ಯವಸ್ಥೆಯೂ ಮಾಡಿಲ್ಲ. ಶುಚಿತ್ವಕ್ಕೆ ಎಳ್ಳಷ್ಟೂ ಆದ್ಯತೆ ನೀಡುತ್ತಿಲ್ಲ ಎಂದು ಪಾಲಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ವಚ್ಛತೆ ಮರೆತ ಅಧಿಕಾರಿಗಳು
ಹಾಸ್ಟೆಲ್‌ನಲ್ಲಿರುವ ಶೌಚಗೃಹ ನಾರುತ್ತಿದೆ. ಜತೆಗೆ ಶೌಚಗೃಹ-ಸ್ನಾನಗೃಹಗಳಿಗೆ ಸರಿಯಾದ ಬಾಗಿಲು-ಕಿಟಕಿಗಳಿಲ್ಲ. ಶೌಚಗೃಹದ ಸೆಫ್ಟಿಕ್ ಟ್ಯಾಂಕ್ ಭರ್ತಿಯಾಗಿ ಇಡೀ ವಸತಿ ನಿಲಯದ ಸುತ್ತಲೂ ದುರ್ನಾತ ಬೀರುತ್ತಿದ್ದರೂ ಯಾವೊಬ್ಬ ಅಧಿಕಾರಿಯೂ ಸಮಸ್ಯೆ ಪರಿಹಾರಕ್ಕೆ ಯತ್ನಿಸಿಲ್ಲ. ಇಲಾಖೆಯು ಕೂಡಲೇ ಮಕ್ಕಳನ್ನು ಸುರಕ್ಷಿತ ವಾತಾವರಣಕ್ಕೆ ಸ್ಥಳಾಂತರಿಸಬೇಕು. ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎನ್ನುವುದು ಪಾಲಕರ ಒತ್ತಾಯವಾಗಿದೆ.
ಆಹಾರದಲ್ಲಿ ಹುಳುಗಳು...
ಹಾಸ್ಟೆಲ್ ಮಕ್ಕಳಿಗೆ ವಿತರಿಸುವ ಅನ್ನದಲ್ಲಿ ನುಸಿಗಳು ಇರುತ್ತವೆ. ಅಡುಗೆಯಲ್ಲಿ ಉಪ್ಪು-ಖಾರ ಹೆಚ್ಚು ಕಮ್ಮಿಯಾದರೆ ಮಕ್ಕಳು ಈ ಬಗ್ಗೆ ಕೇಳುವಂತಿಲ್ಲ. ಸಕಾಲಕ್ಕೆ ನೀರಿನ ಟ್ಯಾಂಕ್ ಸ್ವಚ್ಛಗೊಳಿಸದ ಕಾರಣ ಟ್ಯಾಂಕ್ ಸಂಪೂರ್ಣ ಕಲುಷಿತಗೊಂಡಿದೆ. ಗುಣಮಟ್ಟ, ರುಚಿ-ಶುಚಿಗೆ ನಿಲಯ ಪಾಲಕರಾಗಲೀ ಅಧಿಕಾರಿಗಳಾಗಲೀ ಆದ್ಯತೆ ನೀಡುತ್ತಿಲ್ಲ. ಮಕ್ಕಳಿರುವ ಕೋಣೆಗಳಲ್ಲಿ ಫ್ಯಾನ್‌ಗಳು ಕೆಟ್ಟಿವೆ. ಸ್ವಿಚ್ ಬೋರ್ಡ್‌ಗಳು ಹಾಳಾಗಿದ್ದರೂ ದುರಸ್ತಿ ಮಾಡಿಸಿಲ್ಲ. ಸೌಲಭ್ಯದ ಬಗ್ಗೆ ಪ್ರಶ್ನಿಸಿದರೆ ಬೆದರಿಕೆ ಹಾಕುತ್ತಾರೆ ಎಂದು ಅಳಲು ತೋಡಿಕೊಳ್ಳುತ್ತಾರೆ ವಿದ್ಯಾರ್ಥಿಗಳು.
ಅಧಿಕಾರಿಗಳ ಜಾಣ ಮೌನ
ಹಾಸ್ಟೆಲ್ ಅಂಬೇಡ್ಕರ್ ನಗರದಲ್ಲಿದ್ದಾಗ ಮಕ್ಕಳಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ಇದೇ ಇಲಾಖೆಗೆ ಸಂಬಂಧಿಸಿದ ಮೌನೇಶ್ವರ ಪ್ಲಾಟ್‌ನ ಕಟ್ಟಡಕ್ಕೆ ಸ್ಥಳಾಂತರಗೊಂಡ ನಂತರ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿವೆ. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿರುವ ಇಲಾಖಾ ಕಟ್ಟಡದ ಪಕ್ಕದಲ್ಲೇ ಈ ಹಾಸ್ಟೆಲ್ ಇದ್ದರೂ ಮಕ್ಕಳ ಆರೋಗ್ಯ ಸಮಸ್ಯೆಯಾಗಲೀ ಅಥವಾ ಅಲ್ಲಿನ ದುಃಸ್ಥಿತಿಯಾಗಲೀ ಗಮನಕ್ಕೆ ಬಾರದಿರುವುದು ವಿಪರ್ಯಾಸದ ಸಂಗತಿ.

ಹಾಸ್ಟೆಲ್‌ನಲ್ಲಿ 20 ಮಕ್ಕಳಿಗೆ ಚರ್ಮರೋಗ ಬಂದಿರುವುದು ನಿಜ. ಈ ರೋಗ ಕಾಣಿಸಿಕೊಂಡು 45 ದಿನಗಳಾಗಿವೆ. ಈಗಾಗಲೇ ಮಕ್ಕಳನ್ನು ಆಸ್ಪತ್ರೆಗೆ ತೋರಿಸಲಾಗಿದೆ. ಮುಂದೆ ಈ ರೀತಿಯ ಘಟನೆಗಳು ಆಗದಂತೆ ನೋಡಿಕೊಳ್ಳಲಾಗುತ್ತದೆ.

— ಮಹಾದೇವಿ ಹಂಜಿ, ಹಾಸ್ಟೆಲ್ ವಾರ್ಡನ್

45 ದಿನಗಳಿಂದ ಮಕ್ಕಳು ಚರ್ಮರೋಗದಿಂದ ನರಳುತ್ತಿದ್ದರೂ ಕಲುಷಿತ ನೀರು ಬದಲಾಯಿಸದೆ ಇರುವುದು ಅಧಿಕಾರಿಗಳ ಉಡಾಫೆತನಕ್ಕೆ ಸಾಕ್ಷಿ. ಶೌಚಗೃಹದ ಸೆಫ್ಟಿಕ್ ಟ್ಯಾಂಕ್ ಭರ್ತಿಯಾಗಿ ದುರ್ವಾಸನೆ ಹರಡಿದ್ದರೂ ಯಾರೊಬ್ಬರೂ ಕ್ರಮ ಕೈಗೊಳ್ಳದಿರುವುದು ಖಂಡನೀಯ. ಕೇವಲ ವಾರ್ಡನ್ ಮೇಲೆ ಕ್ರಮ ಕೈಗೊಂಡರೆ ಸಾಲದು. ತಕ್ಷಣವೇ ಮಕ್ಕಳಿಗೆ ಒಳ್ಳೆಯ ಚಿಕಿತ್ಸೆ ಕೊಡಿಸಬೇಕು. ಉತ್ತಮ ಆಹಾರ ಮತ್ತು ಮೂಲಸೌಕರ್ಯ ಒದಗಿಸಬೇಕು.

— ಶಂಕರಗೌಡ ದೊಡಮನಿ, ಜೆಡಿಎಸ್ ತಾಲೂಕು ಅಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net