ಹುಬ್ಬಳ್ಳಿಯಲ್ಲಿ ದಾರಿ ತಪ್ಪಿದ ಎಸ್​ಐಆರ್ SIR

SIR
SIR
Published on

ಪ್ರಮುಖ ಮುಖ್ಯಾಂಶಗಳು

  • ಮನೆಗಳಿಗೆ ಭೇಟಿ ನೀಡದೇ ಸ್ಥಳವೊಂದರಲ್ಲಿ ಕುಳಿತು ಪರಿಷ್ಕರಣೆ ಮಾಡಿದ ಬಿಎಲ್​ಒ.
  • ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಬೃಹತ್ ಹಗರಣ ನಡೆಯುತ್ತಿದೆ.
  • ವಾಟ್ಸ್ ಆಪ್ ಗ್ರುಪ್​ಗಳಲ್ಲಿ ಬಹಿರಂಗ ಪ್ರಚಾರ ಮಾಡಲಾಗುತ್ತಿದೆ.
ಹುಬ್ಬಳ್ಳಿ :
ಗಣೇಶಪೇಟ ರಸ್ತೆಯ ಫಿಶ್ ಮಾರ್ಕೆಟ್ ಪಕ್ಕದ ಅಂಗನವಾಡಿಯಲ್ಲಿ ಬಿಎಲ್​ಒಗಳು ಹಲವಾರು ಜನರನ್ನು ಸೇರಿಸಿ, ಮತದಾರರ ಪಟ್ಟಿ ಪರಿಷ್ಕರಿಸುತ್ತಿದ್ದರು.
ಸ್ಥಳಕ್ಕೆ ಧಾವಿಸಿದ ಬಿಜೆಪಿ ಕಾರ್ಯಕರ್ತರು, ಬಿಎಲ್​ಒಗಳನ್ನು ತರಾಟೆಗೆ ತೆಗೆದುಕೊಂಡರು.
ಡಾಕಪ್ಪ ಸರ್ಕಲ್​ನ ಮಸೀದಿವೊಂದರ ಪಕ್ಕದ ಖುಲ್ಲಾ ಜಾಗದಲ್ಲಿಯೂ ಜನರನ್ನು ಸೇರಿಸಿಕೊಂಡು, ಪರಿಷ್ಕರಣೆ ನಡೆಸಲಾಗುತ್ತಿತ್ತು.
ಬಿಎಲ್​ಇಗಳನ್ನು ತರಾಟೆ ತೆಗೆದುಕೊಂಡ ಬಿಜೆಪಿ ಕಾರ್ಯಕರ್ತರು, ಮನೆ ಮನೆಗೆ ಭೇಟಿ ನೀಡಿ ಪರಿಷ್ಕರಣೆ ನಡೆಸುವಂತೆ ತಾಕೀತು ಮಾಡಿದರು.
ಸರ್ಕಾರಿ ಕಾರ್ಯಕ್ರಮದ ನಿಯಮಗಳಂತೆ ಬಿಎಲ್​ಒಗಳು ಕಾರ್ಯನಿರ್ವಹಿಸಬೇಕು. ಇಲ್ಲದಿದ್ದರೆ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಬಿಜೆಪಿ ಕಾರ್ಯಕರ್ತರು ಎಚ್ಚರಿಕೆ ನೀಡಿದರು.
ಹು-ಧಾ ಪೂರ್ವ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಪ್ರಮುಖ ರಾಜು ಜರತಾರಘರ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಎಸ್​ಐಆರ್ ಪ್ರಕ್ರಿಯೆ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿದರು.
ಈಶ್ವರ ನಗರ ಹಾಗೂ ಇನ್ನಿತರ ಸ್ಥಳಗಳಲ್ಲಿಯೂ ಒಂದೇ ಸ್ಥಳದಲ್ಲಿ ಜನರನ್ನು ಸೇರಿಸಿ, ಮತದಾರರ ಪಟ್ಟಿ ಪರಿಷ್ಕರಿಸುತ್ತಿರುವ ದೂರುಗಳು ಕೇಳಿಬಂದಿವೆ.
ಮಸೀದಿ, ಕಲ್ಯಾಣ ಮಂಟಪ, ಅಂಗನವಾಡಿ ಹಾಗೂ ಇನ್ನಿತರ ಸ್ಥಳಗಲ್ಲಿ ಜನರನ್ನು ಸೇರಿಸಿ, ಮತದಾರರ ಪಟ್ಟಿ ಪರಿಷ್ಕರಿಸುತ್ತಿರುವ ಬಿಎಲ್​ಒಗಳ ಕಾರ್ಯಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಚುನಾವಣೆ ಆಯೋಗವು ಕರ್ನಾಟಕದಲ್ಲಿ ಆರಂಭಿಸಿರುವ ಮತದಾರರ ಪರಿಷ್ಕರಣೆ ಕಾರ್ಯವನ್ನು ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ಅಡ್ಡದಾರಿ ಹಿಡಿಸಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ದೂರಿದ್ದಾರೆ.
ರಾಮನಗರದಲ್ಲಿ ಗುರುವಾರ ನಡೆದಿದ್ದ ಎಸ್​ಐಆರ್ ಪ್ರಕ್ರಿಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶುಕ್ರವಾರದಂದು ಶಿಗ್ಗಾಂವಿ, ಸವಣೂರು, ಹುಬ್ಬಳ್ಳಿ-ಧಾರವಾಡದಲ್ಲಿಯೂ ಎಸ್​ಐಆರ್ ಅವ್ಯವಸ್ಥೆ ನಡೆಯುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಸೀದಿಗಳಲ್ಲಿ ಕುಳಿತು ಅರ್ಜಿ ಭರ್ತಿ ಮಾಡುವ ಮೂಲಕ ದೊಡ್ಡ ಹಗರಣವೇ ಎಸ್​ಐಆರ್ ಪ್ರಕ್ರಿಯೆಯಲ್ಲಿ ನಡೆಯುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದ್ಧಾರೆ.
ಸಾಲದ್ದಕ್ಕೆ ರಾಜಾರೋಷವಾಗಿ ವಾಟ್ಸ್ ಆಪ್ ಗ್ರುಪ್​ಗಳಲ್ಲಿ ಬಹಿರಂಗ ಪ್ರಚಾರ ಸಹ ಮಾಡಲಾಗುತ್ತಿದೆ. ತಕ್ಷಣವೇ ಇದಕ್ಕೆಲ್ಲ ಬ್ರೆಕ್ ಹಾಕಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಹಲವೆಡೆ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಕಾನೂನು ಬಾಹಿರವಾಗಿ ವ್ಯವಸ್ಥಿತವಾಗಿ ಅಕ್ರಮ ಎಸಗಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಎಸ್​ಐಆರ್ ನಿಯಮ ಉಲ್ಲಂಘನೆಯು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ. ನಿಯಮಗಳನ್ನೆಲ್ಲ ಗಾಳಿಗೆ ತೂರಿ, ಮಸೀದಿಗಳಲ್ಲಿ ಕುಳಿತು ಅರ್ಜಿಗಳನ್ನು ಭರ್ತಿ ಮಾಡುತ್ತಿರುವ ಬಗ್ಗೆ ರಾಜ್ಯದ ವಿವಿಧೆಡೆಯಿಂದ ಮೋಬೈಲ್ ಕರೆಗಳು ಬರುತ್ತಿರುವುದಾಗಿ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಬೃಹತ್ ಹಗರಣವೇ ನಡೆಯುತ್ತಿದೆ. ಕೇಂದ್ರ ಚುನಾವಂಆ ಆಯೋಗದ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಸಂಪೂರ್ಣ ಗಾಳಿಗೆ ತೂರಲಾಗಿದೆ.
ರಾಜಕೀಯ ಲಾಭಕ್ಕಾಗಿ ಮತದಾರರ ಪಟ್ಟಿಯನ್ನು ತಮಗೆ ಬೇಕಾದಂತೆ ಸಿದ್ಧಪಡಿಸಿಕೊಳ್ಳಲು ರಾಜ್ಯ ಸರ್ಕಾರ ವ್ಯವಸ್ಥಿತ ಸಂಚು ರೂಪಿಸಿದಂತಿದೆ ಎಂದು ಆರೋಪಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪುರ್ವ ವಿಧಾನಸಭೆ ಕ್ಷೇತ್ರದ 63ನೇ ವಾರ್ಡ್​ನ 16ನೇ ಬೂತ್​ನಲ್ಲಿ ಎಸ್​ಐಆರ್ ನಿಯಮ ಬಾಹಿರ ಚಟುವಟಿಕೆ ನಡೆದಿದೆ.
ಬಿಎಲ್​ಒ ಮೇರಿ ರಾಮಚಂದ್ರ ಹರಪನಾಳ ಅವರು ಮನೆ ಮನೆಗೆ ತೆರಳದೇ ಸ್ಥಳವೊಂದರಲ್ಲಿ ಕುಳಿತು ಮತಪಟ್ಟೆ ಪರಿಷ್ಕರಣೆ ನಡೆಸಿರುವುದ ಬಹಿರಂಗಗೊಂಡಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಎಸ್​ಐಆರ್ ಹಗರಣದ ಹಿಂದೆ ಯಾರ ಹಿತಾಸಕ್ತಿ ಅಡಗಿದೆ ಎಂಬುದರ ಬಗ್ಗೆ ನಿಷ್ಪಕ್ಷಪಾತ ಮತ್ತು ಸಮಗ್ರ ತನಿಖೆಯಾಗಬೇಕು.
ತಪ್ಪಿತಸ್ಥ ಅಧಿಕಾರಿಗಳು ಮತ್ತು ಇದರ ಹಿಂದಿರುವ ರಾಜಕೀಯ ಕೈಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net