SIR campaign ಮ್ಯಾಪಿಂಗ್ ನೆಪದಲ್ಲಿ ನೈಜ ಮತದಾರರ ಕೈಬಿಡಬೇಡಿ
SIR campaign ಹುಬ್ಬಳ್ಳಿಯಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ಎಸ್ಐಆರ್ ಜನಜಾಗೃತಿ ಸಮಾವೇಶವನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಉದ್ಘಾಟಿಸಿದರು. ಶಾಸಕರಾದ ಪ್ರಸಾದ ಅಬ್ಬಯ್ಯ, ಸಂತೋಷ ಲಾಡ್, ಯಾಸೀರಖಾನ್ ಪಠಾಣ್, ಜಕ್ಕಪ್ಪನವರ, ವಿ.ಆರ್. ಸುದರ್ಶನ, ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಎಸ್ಐಆರ್ ಜಾಗೃತಿ ಸಮಾವೇಶದಲ್ಲಿ ಹರಿಪ್ರಸಾದ ಹೇಳಿಕೆ
ಬೆಳಗಾವಿ ವಿಭಾಗ ಮಟ್ಟದ ಎಸ್ಐಆರ್ ಸಮಾವೇಶ
ಹುಬ್ಬಳ್ಳಿ: SIR campaign ಮತದಾರ ಪಟ್ಟಿ ವಿಶೇಷ ಪರಿಷ್ಕರಣೆಗೆ (ಎಸ್ಐಆರ್) ನಮ್ಮ ಯಾವುದೇ ವಿರೋಧವಿಲ್ಲ. ಆದರೆ, ತಮಿಳುನಾಡು, ಬಿಹಾರ, ಪಶ್ಚಿಮ ಬಂಗಾಳದಲ್ಲಿ ಷಡ್ಯಂತ್ರ ಮಾಡಿ ಅನೇಕರನ್ನು ಮತಪಟ್ಟಿಯಿಂದ ಕೈಬಿಡಲಾಗಿದೆ. ಇದರ ಬಗ್ಗೆ ಜನರು ಜಾಗೃತರಾಗಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಹೇಳಿದರು.
ನಗರದಲ್ಲಿ ಗುರುವಾರ ಮಹಾನಗರ ಹಾಗೂ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ಬೆಳಗಾವಿ ವಿಭಾಗ ಮಟ್ಟದ ಎಸ್ಐಆರ್ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಎಲ್ಲ ಕಡೆ ಎಸ್ಐಆರ್ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ. ಈ ಹಿಂದೆ ಮತಪಟ್ಟಿ ಪರಿಷ್ಕರಣೆ ಮಾಡಲಿಲ್ಲ. ಈಗ ಸಮಗ್ರ ಮತಪಟ್ಟಿ ಪರಿಷ್ಕರಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಅಮರ್ತ್ಯ ಸೇನ್, ಗೋವಾದ ನೌಕಾದಳದ ಮುಖ್ಯಸ್ಥರು, ನೇತಾಜಿ ಸುಭಾಸಚಂದ್ರ ಭೋಸ್ ಅವರ ಮೊಮ್ಮಗ ಸೇರಿದಂತೆ ಅನೇಕರ ಹೆಸರನ್ನೇ ಮತಪಟ್ಟಿಯಿಂದ ಕೈಬಿಟ್ಟಿದ್ದಾರೆ. ಅಂತಹ ದೊಡ್ಡ ವ್ಯಕ್ತಿಗಳಿಗೇ ಹೀಗಾದರೆ ಸಾಮಾನ್ಯರ ಗತಿ ಏನು? ಬಿಜೆಪಿಯನ್ನು ಯಾರು ವಿರೋಧ ಮಾಡುತ್ತಾರೋ ಅವರ ಹೆಸರನ್ನು ಕೈಬಿಡಲಾಗುತ್ತಿದೆ ಎಂದು ದೂರಿದರು.
ಮತಪಟ್ಟಿಯಲ್ಲಿ ದಲಿತರು, ಅಲೆಮಾರಿಗಳು, ಅಲ್ಪಸಂಖ್ಯಾತರು ಇಂಥವರನ್ನೇ ತೆಗೆದು ಹಾಕಲಾಗುತ್ತಿದೆ. ಯಾವುದೇ ಕಾರಣಕ್ಕೂ ನಾಗರೀಕರ ಹಕ್ಕು ಕಸಿದುಕೊಳ್ಳಬಾರದು ಎಂಬ ಕಾರಣಕ್ಕೆ ಜಾಗೃತಿ ಹಮ್ಮಿಕೊಂಡಿದ್ದೇವೆ. ಮ್ಯಾಪಿಂಗ್ ಹೆಸರಿನಲ್ಲಿ ನೈಜ ಮತದಾರರನ್ನು ಕೈಬಿಡಬಾರದು ಎಂಬುದು ನಮ್ಮ ಒತ್ತಾಯ ಎಂದರು.
ಅನುಕೂಲಕ್ಕೆ ತಕ್ಕಂತೆ
ಕಾರ್ಯಕ್ರಮ ಸಂಯೋಜಕ ವಿ.ಆರ್. ಸುದರ್ಶನ ಮಾತನಾಡಿ, ದೇಶದಲ್ಲಿ ಚುನಾವಣೆಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಿಸಿಕೊಂಡವರು ಬಿಜೆಪಿಯವರು. ಅವರ ಕುತಂತ್ರಗಳನ್ನು ಜನರ ಮುಂದಿಡುವುದು ಸಮಾವೇಶದ ಉದ್ದೇಶ. ಈ ಮೂಲಕ ಚುನಾವಣಾ ಆಯೋಗಕ್ಕೆ ಎಚ್ಚರಿಕೆ ಕೊಡಲು ಕಾಂಗ್ರೆಸ್ ಬಯಸುತ್ತದೆ ಎಂದರು.
ಶಾಸಕರಾದ ಪ್ರಸಾದ ಅಬ್ಬಯ್ಯ, ಯಾಸೀರಖಾನ್ ಪಠಾಣ್, ಮುಖಂಡರಾದ ಶಿವಲೀಲಾ ಕುಲಕರ್ಣಿ ಮಾತನಾಡಿ, ಎಸ್ಐಆರ್ ಮೂಲಕ ಜನರ ಹಕ್ಕು ಕಸಿಯಲು ಹೊರಟಿರುವ ಬಿಜೆಪಿಯ ಹುನ್ನಾರ ಸಾರ್ವಜನಿಕರಿಗೆ ತಿಳಿಸುವ ಕೆಲಸ ಮಾಡುತ್ತೇವೆ ಎಂದರು.