siddarudh aarati ಭಕ್ತಿ ಭಾವದ ಆರೂಢ ಆರತಿ

siddarudh aarati ಹುಬ್ಬಳ್ಳಿಯ ಪ್ರಸಿದ್ಧ ಸಿದ್ಧಾರೂಢ ಮಠ ಆವರಣದ ಪುಷ್ಕರಣಿಯಲ್ಲಿ ಅಮಾವಾಸ್ಯೆ ಅಂಗವಾಗಿ ಶ್ರೀ ಆರೂಢ ಆರತಿ ಭಕ್ತಿ ಭಾವದಿಂದ ನೆರವೇರಿತು.
siddarudh aarati ಹುಬ್ಬಳ್ಳಿಯ ಪ್ರಸಿದ್ಧ ಸಿದ್ಧಾರೂಢ ಮಠ ಆವರಣದ ಪುಷ್ಕರಣಿಯಲ್ಲಿ ಅಮಾವಾಸ್ಯೆ ಅಂಗವಾಗಿ ಶ್ರೀ ಆರೂಢ ಆರತಿ ಭಕ್ತಿ ಭಾವದಿಂದ ನೆರವೇರಿತು.
Published on

ಪ್ರಮುಖ ಮುಖ್ಯಾಂಶಗಳು

  • ಸಿದ್ಧಾರೂಢ ಮಠದಲ್ಲಿ ವೈಭವ ಕಣ್ತುಂಬಿಕೊಂಡ ಭಕ್ತರು
  • ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ ಡಾ. ವಿ.ಎಸ್​.ವಿ. ಪ್ರಸಾದ
ಹುಬ್ಬಳ್ಳಿ: siddarudh aarati ಇಲ್ಲಿಯ ಪ್ರಸಿದ್ಧ ಶ್ರೀ ಸಿದ್ಧಾರೂಢಸ್ವಾಮಿ ಮಠ ಆವರಣದ ಪುಷ್ಕರಣಿಯಲ್ಲಿ ಪ್ರತಿ ಅಮಾವಾಸ್ಯೆಗೆ ಏರ್ಪಡಿಸುವ ಶ್ರೀ ಆರೂಢ ಆರತಿ ಎರಡನೇ ಕಾರ್ಯಕ್ರಮ ಭಾನುವಾರ ಭಕ್ತಿ ಭಾವದಿಂದ ನೆರವೇರಿತು.
ಕಾಶಿಯ ಗಂಗಾ ಆರತಿ ಮಾದರಿಯಲ್ಲಿ ಆಯೋಜಿಸಲಾಗುವ ಆರತಿ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಆಗಮಿಸಿ ಕಣ್ತುಂಬಿಕೊಂಡರು.
ಪುಷ್ಕರಣಿ ಸುತ್ತಲೂ ಕಿಕ್ಕಿರಿದು ತುಂಬಿದ್ದ ಭಕ್ತರು ಶ್ರೀ ಸಿದ್ಧಾರೂಢರು ಹಾಗೂ ಶ್ರೀ ಗುರುನಾಥರೂಢರ ಸ್ಮರಣೆ ಮಾಡುತ್ತ ಜಯಘೋಷಗಳ ಮಧ್ಯೆ ಆರತಿ ಬೆಳಗಿದರು.
ಐವರು ತರಬೇತಿ ಪಡೆದ ಪೂಜಾರಿಗಳು ಸರಿಯಾಗಿ 7 ಗಂಟೆಗೆ ಆರತಿ ಕಾರ್ಯಕ್ರಮ ಆರಂಭಿಸಿ ಸುಮಾರು ಅರ್ಧ ತಾಸು ಪೂಜಾ ಕೈಂಕರ್ಯ, ಆರತಿ ಬೆಳಗುವ ಪ್ರಕ್ರಿಯೆ ನೆರವೇರಿಸಿದರು.

ಸಿನೆಮಾ ಮಾಡುವ ಆಶಯ

ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್​.ವಿ. ಪ್ರಸಾದ, ಹುಬ್ಬಳ್ಳಿಯ ನಡೆದಾಡುವ ದೇವರು ಎಂದೇ ಖ್ಯಾತರಾದ ಶ್ರೀ ಸಿದ್ಧಾರೂಢಮಠ ದಕ್ಷಿಣ ಕಾಶಿಯಾಗಿದೆ. ಕಾಶಿಯ ಗಂಗಾ ಆರತಿ ಸಮಾನವಾದ ಶ್ರೀಮಠದ ಪುಷ್ಕರಣಿಯಲ್ಲಿ ಆರೂಢ ಆರತಿ ನೋಡುವದೇ ನಮ್ಮೆಲ್ಲರ ಭಾಗ್ಯ ಎಂದರು.
ಗೋವಾದ ಭಕ್ತರೊಬ್ಬರು ಶ್ರೀ ಸಿದ್ಧಾರೂಢರ ಡಾಕ್ಯುಮೆಂಟರಿ ಮಾಡಿದ್ದಾರೆ. ಶ್ರೀಮಠದ ಟ್ರಸ್ಟ್​ ಕಮಿಟಿ ಶ್ರೀಸಿದ್ಧಾರೂಢ ಸ್ವಾಮೀಜಿ ಕುರಿತು ಚಲನಚಿತ್ರ ನಿರ್ಮಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಸಮಿತಿ ಸೂಚನೆಯಂತೆ ಸಿನೆಮಾ ಮಾಡಲು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡಿರುವೆ. ದೇವರು ಇಂತಹ ಸೇವೆ ಮಾಡಲು ಅವಕಾಶ ನೀಡಿದ್ದಕ್ಕೆ ನಾನೇ ಪುಣ್ಯವಂತ ಎಂದರು.
ಶಾಂತಾಶ್ರಮದ ಅಭಿನವ ಶ್ರೀಸಿದ್ಧಾರೂಢ ಸ್ವಾಮೀಜಿ ಆಶೀರ್ವಚನ ನೀಡಿ, ಶ್ರೀಮಠದ ಪುಷ್ಕರಣಿ ಸಾಮಾನ್ಯವಾದುದಲ್ಲ. ಶ್ರೀಸಿದ್ಧಾರೂಢರು ಪವಾಡ ಮಾಡಿ ಬರಗಾಲದಲ್ಲೂ ಮಳೆ ತರಿಸಿ ಖಾಲಿಯಾಗಿದ್ದ ಕೆರೆ ತುಂಬುವಂತೆ ಮಾಡಿದ ತಾಣ ಇದು. ಇಲ್ಲಿ ಸಂಕಲ್ಪ ಮಾಡಿಕೊಂಡರೆ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ. ಅಂತಹ ಪುಷ್ಕರಣಿಯಲ್ಲಿ ಆರತಿ ಬೆಳಗುತ್ತಿರುವುದು ಸಂಕಲ್ಪಕ್ಕೆ ಇನ್ನಷ್ಟು ಶಕ್ತಿ ತಂದಿದೆ ಎಂದರು.
ಟ್ರಸ್ಟ್​ ಕಮಿಟಿ ಚೇರ್ಮನ್​ ಚನ್ನವಿರ ಮುಂಗರವಾಡಿ ಮಾತನಾಡಿ, ಹುಬ್ಬಳ್ಳಿಯೇ ಜಗದ ಕೈಲಾಸ, ಸಿದ್ಧಾರೂಢರೇ ಪರಮೇಶ. ಭಕ್ತರ ಆರಾಧ್ಯದೈವ ಶ್ರೀಸಿದ್ಧಾರೂಢರ ಚಲನಚಿತ್ರ ಮಾಡುವ ಬಯಕೆ ಇದೆ ಎಂದು ಹೇಳಿದಾಗ ಡಾ. ಪ್ರಸಾದ ಅವರು ಮುಂದೆ ಬಂದಿದ್ದಾರೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net