

ಹುಬ್ಬಳ್ಳಿ : ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ರಾಜ್ಯ ಮಟ್ಟದ ಹಿರಿಯ ನಾಗರಿಕರ ಕ್ರೀಡಾ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸೆ. 23ರಿಂದ 26ರವರೆಗೆ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಬಿ.ಎ. ಪಾಟೀಲ, ನೆಹರು ಕ್ರೀಡಾಂಗಣದಲ್ಲಿ 23ರಂದು ಬೆಳಗ್ಗೆ 10.30ಕ್ಕೆ ಮೇಯರ್ ದುರ್ಗಮ್ಮ ಬೆಜವಾಡ ಉದ್ಘಾಟಿಸುವರು.
ಹುಡಾ ಅಧ್ಯಕ್ಷ ರಾಬರ್ಟ ದದ್ದಾಪುರಿ, ಮಹಾವೀರ ಲಿಂಬ್ ಸೆಂಟರ್ ಅಧ್ಯಕ್ಷ ಮಹೇಂದ್ರ ಸಿಂಘಿ, ಲಾಯನ್ಸ್ ಪರಿವಾರದ ಅಧ್ಯಕ್ಷ ಆನಂದ ಭೂಮರಡ್ಡಿ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಹೇಳಿದರು.
ಹೊಸೂರಿನ ಸಂಘದ ಕಾರ್ಯಾಲಯದಲ್ಲಿ 24ರಂದು ಏರ್ಪಡಿಸಿರುವ ಒಳಾಂಗಣ ಕ್ರೀಡೆಯನ್ನು ಧಾರವಾಡ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರ ಸಂಘದ ಅಧ್ಯಕ್ಷ ಸಂದೀಪ ಬೂದಿಹಾಳ ಉದ್ಘಾಟಿಸುವರು. ದಾವಣಗೆರೆಯ ಬಾಲಾಜಿ ನಗರದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ 25ರಂದು ಮಧ್ಯಾಹ್ನ 3 ಗಂಟೆಗೆ ರಾಜ್ಯ ಮಟ್ಟದ ಹಿರಿಯ ನಾಗರಿಕರ ಕಾನೂನು ಜಾಗೃತಿ ಸಭೆ ಹಾಗೂ ಮುಖಂಡರ ಸಭೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
26ರಂದು ಬೆಳಗ್ಗೆ 10.30ಕ್ಕೆ ಹುಬ್ಬಳ್ಳಿಯ ಹೊಸೂರುನಲ್ಲಿರುವ ಸಂಘದ ಕಾರ್ಯಾಲಯದಲ್ಲಿ ಶಿಕ್ಷಕರು ಹಾಗೂ ಇಂಜಿನಿಯರ್ ದಿನಾಚರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಹಾಗೂ ಹಿರಿಯ ನಾಗರಿಕರ ಇಲಾಖೆಯ ಉಪ ನಿರ್ದೇಶಕ ವೀರನಗೌಡ ಪಾಟೀಲ ಉದ್ಘಾಟಿಸುವರು. ಜಾನಪದ ಕಲಾವಿದ ಡಾ. ರಾಮು ಮೂಲಗಿ ಹಾಗೂ ಕಸಾಪ ಜಿಲ್ಲಾ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಹೇಳಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಪಿ.ಎಸ್. ಧರಣೆಪ್ಪನವರ ಮತ್ತು ಶಿವಶಂಕರ ಹಿರೇಮಠ ಉಪಸ್ಥಿತರಿರುವರು. ಅಕ್ಟೋಬರ್ 5 ಮತ್ತು 6 ರಂದು ಶ್ರೀ ಸಿದ್ಧಾರೂಢ ಮಠದ ಸಭಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಹಿರಿಯ ನಾಗರಿಕರಿಗೆ ಸೌಲಭ್ಯಗಳನ್ನು ಸರ್ಕಾರ ಸರಿಯಾಗಿ ನೀಡುತ್ತಿಲ್ಲ. ಪ್ರತಿ ವರ್ಷ ಸರ್ಕಾರ ಅಕ್ಟೋಬರ್ 1ರಂದು ಹಿರಿಯ ನಾಗರಿಕರನ್ನು ಸನ್ಮಾನಿಸಿ, ಬೇಡಿಕೆಗಳನ್ನು ಆಲಿಸುತ್ತಿತ್ತು. ಆದರೆ, ಕಳೆದ ವರ್ಷ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಈ ಸಂಪ್ರದಾಯ ಕೈಬಿಡುವ ಮೂಲಕ ಹಿರಿಯ ನಾಗರಿಕರಿಗೆ ಅವಮಾನಿಸಿದರು. ಇದನ್ನು ವಿರೋಧಿಸಿ ಸಂಘದಿಂದ ಪ್ರತಿಭಟನೆ ನಡೆಸಲಾಗಿತ್ತು ಎಂದು ತಿಳಿಸಿದರು.
ಸಂಘದ ಪಿ.ಪಿ. ಗಾಯಕವಾಡ, ಯು.ಬಿ. ಗಾಯಕವಾಡ ಹಾಗೂ ಇತರರಿದ್ದರು.