ಸ್ಟಿಂಗ್ ತಪ್ಪಿತಸ್ಥರನ್ನು ಜೈಲಿಗೆ ಅಟ್ಟಿ

 ಮಾಧ್ಯಮದವರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ.
ಮಾಧ್ಯಮದವರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ.
Published on: 

ಹುಬ್ಬಳ್ಳಿ : ಸ್ಟಿಂಗ್ ಆಪರೇಶನ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ತಪ್ಪಿತಸ್ಥರನ್ನು ಒದ್ದು ಜೈಲಿಗೆ ಹಾಕಬೇಕು ಎಂದು ಮಾಜಿ ಸಭಾಪತಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆಗ್ರಹಿಸಿದರು.

ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ಆಪರೇಶನ್​ನಂತಹ ಪ್ರಕರಣಗಳು ಈ ಹಿಂದೆಯೂ ಆಗುತ್ತಿದ್ದವು. ಆದರೆ, ಆ ಸಮಯದಲ್ಲಿ ಹೆಚ್ಚು ಬಹಿರಂಗಗೊಳ್ಳುತ್ತಿರಲಿಲ್ಲ. ಆದರೆ, ಇದೀಗ ಬಹಿರಂಗಾಗಿಯೇ ಸ್ಟಿಂಗ್ ಆಪರೇಶನ್ ನಡೆದಿವೆ ಎಂದು ಕಳವಳ ವ್ಯಕ್ತಪಡಿಸಿದರು.

ದಿ. ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಐಟಿಬಿಟಿಗೆ ಹೆಸರುವಾಸಿಯಾಗಿದ್ದ ಕರ್ನಾಟಕ, ಇದೀಗ ಸ್ಟಿಂಗ್ ಆಪರೇಶನ್​ನಿಂದಾಗಿ ಇಡೀ ದೇಶದಲ್ಲಿಯೇ ಕುಖ್ಯಾತಿಗೊಂಡಿದೆ ಎಂದರು.

ಇಂದಿನ ರಾಜಕಾರಣ ತಿಳಿದುಕೊಂಡಷ್ಟು ಸರಳ ಇಲ್ಲ. ತತ್ವ, ಆದರ್ಶಗಳು ರಾಜಕಾರಣದಿಂದ ಮಾಯವಾಗಿವೆ. ಈ ಹಿಂದೆ ದಿ. ರಾಮಕೃಷ್ಣ ಹೆಗಡೆ ಅವರ ವಿರುದ್ಧ ಫೋನ್ ಕದ್ದಾಲಿಕೆ ಆರೋಪ ಬಂದಾಗ ಅವರು ರಾಜೀನಾಮೆ ನೀಡಿದ್ದರು. ಈಗಲೂ ಸ್ಟಿಂಗ್ ಆಪರೇಶನ್ ಮಾಡಿಸಿದವರು ಯಾರೆಂದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.

ರಾಜಕಾರಣಿಗಳು ಇನ್ನೊಬ್ಬರಿಗೆ ಮಾದರಿಯಾಗುವಂತಿರಬೇಕು. ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಮಾತ್ರ ಸತ್ಯಾಂಶ ಹೊರಬೀಳಲಿದೆ. ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಲು ತಕ್ಷಣ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ನೀರು, ವಿದ್ಯುತ್ ಪೂರೈಕೆ ಸೇರಿ ಹಲವಾರು ಸಮಸ್ಯೆಗಳನ್ನು ಕಬ್ಬು ಬೆಳೆಗಾರರು ಎದುರಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಮಧ್ಯೆ ಪ್ರವೇಶಿಸಿ, ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net