ಹುಬ್ಬಳ್ಳಿ: sankranti ಮಕರ ಸಂಕ್ರಮಣವನ್ನು ನಗರದಲ್ಲಿ ಅನೇಕರು ಸಂಭ್ರಮದಿಂದ ಆಚರಿಸಿದರು. ಭೋಗಿ ಹಬ್ಬ ಎಂದೇ ಕರೆಯಲಾಗುವ ಸಂಕ್ರಾಂತಿಯಂದು ಹಲವರು ಸಹ ಭೋಜನ ಸವಿದರು.
ಪಿಕ್ನಿಕ್ ತಾಣ, ಉದ್ಯಾನ ಮುಂತಾದೆಡೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಹಬ್ಬ ಆಚರಿಸಿದರು. ಪರಸ್ಪರ ಎಳ್ಳು ಬೆಲ್ಲ ಕೊಟ್ಟು ಒಳ್ಳೆಯ ಮಾತನಾಡೋಣ ಎಂದು ಹಾರೈಸಿದರು.
ಮಹಿಳೆಯರು, ಮಕ್ಕಳು, ಬಂಧು ಮಿತ್ರರು ಹಾಗೂ ಕುಟುಂಬದವರು ಸೇರಿ ಉದ್ಯಾನ, ಜಮೀನುಗಳಿಗೆ ತೆರಳಿ ಸಂಕ್ರಾಂತಿ ಸಂಭ್ರಮ ಹೆಚ್ಚಿಸಿದರು.
ರೈತರು, ಕೃಷಿಕರು ಸಂಕ್ರಮಣ ಕಾಲದಲ್ಲಿ ಭೂತಾಯಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಹಿಂಗಾರು ಹಂಗಾಮಿನ ಬೆಳೆಗಳು ಕೊಯ್ಲಿಗೆ ಬರುವ ಹೊತ್ತು ಇದಾಗಿದ್ದು, ಎಲ್ಲೆಡೆ ಸಂಭ್ರಮ ಮನೆ ಮಾಡಿರುತ್ತದೆ. ಹಾಗಾಗಿ ಭೂತಾಯಿ ಮಡಿಲಲ್ಲಿ ಅನ್ನದಾತರು ತಮ್ಮವರೊಂದಿಗೆ ನಲಿಯುವ ಮೂಲಕ ಸುಗ್ಗಿಕಾಲಕ್ಕೆ ಅಣಿಯಾಗುತ್ತಾರೆ.
ಜೋಳ, ಗೋಧಿ, ಕಡಲೆ, ಕುಶಬೆ, ತೊಗರಿ ಮುಂತಾದ ಬೆಳೆಗಳು ಹೊಲದಲ್ಲಿ ನಳನಳಿಸುತ್ತಿವೆ. ಅದರಂತೆ ರೈತರ ಮೊಗದಲ್ಲಿಯೂ ಮಂದಹಾಸವಿದೆ. ಹಾಗಾಗಿ ಸಂಕ್ರಮಣ ಹಬ್ಬ ಭರ್ಜರಿಯಾಗಿ ನಡೆಯುತ್ತಿದೆ.
ಮಕ್ಕಳು ಗಾಳಿ ಪಟ ಹಾರಿಸಿ ಆನಂದ ಪಟ್ಟರು. ಈ ಬಾರಿ ಎರಡು ದಿನ ಸಂಕ್ರಾಂತಿ ಹಬ್ಬ ಆಚರಿಸಲಾಗುತ್ತಿದೆ. ಗುರುವಾರ ಸಂಕ್ರಮಣ ಅಂಗವಾಗಿ ಎಲ್ಲಡೆ ಇನ್ನಷ್ಟು ಸಡಗರ ಕಂಡು ಬರಲಿದೆ.