ಜೈನ ಅಭಿವೃದ್ಧಿ ನಿಗಮ ಸ್ಥಾಪಿಸದಿದ್ದರೆ ಸಲ್ಲೇಖನ ವ್ರತ

ಸರ್ಕಾರಕ್ಕೆ 10 ದಿನಗಳ ಗಡವು ನೀಡಿದ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು.
Published on: 

ಹುಬ್ಬಳ್ಳಿ : ಸ್ವತಂತ್ರ ಜೈನ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ 10 ದಿನಗಳ ಗಡವು ನೀಡಿರುವ ತಾಲೂಕಿನ ವರೂರು ನವಗ್ರಹ ತೀರ್ಥಕ್ಷೇತ್ರದ ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು, ಬೇಡಿಕೆ ಈಡೇರದಿದ್ದಲ್ಲಿ ವಿವಿಧ ಹಂತದ ಹೋರಾಟ ಕೈಗೊಂಡು ಕೊನೆಯಲ್ಲಿ ಅನ್ನ, ನೀರು ತ್ಯಜಿಸಿ, ಸಲ್ಲೇಖನ ವ್ರತ ಕೈಗೊಂಡು ದೇಹತ್ಯಾಗ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಊರಿಂದ ಊರಿಗೆ ವಿಹಾರ (ಕಾಲ್ನಡಿಗೆಯಲ್ಲಿ) ಕೈಗೊಳ್ಳುವ ಜೈನ ಸಾಧು, ಸಾಧಿ್ವುರಿಗೆ ರಕ್ಷಣೆ ನೀಡಬೇಕು. ಜೈನ ತೀರ್ಥ ಕ್ಷೇತ್ರಗಳ ರಕ್ಷಣೆಗೆ ವಿಶೇಷ ಯೋಜನೆ ರೂಪಿಸಬೇಕು. ಜೈನ ಸಮಾಜದ ಬಡವರಿಗೆ ಶ್ರೀ ಸಮ್ಮೇದ ಶಿಖರ್ಜಿಗೆ ಉಚಿತ ವಾರ್ಷಿಕ ತೀರ್ಥಯಾತ್ರೆ ಮಾಡಿಸಬೇಕು. ಜೈನ ಸಾಧು, ಸಾಧಿ್ವುರು ವಿಹಾರದ ಸಂದರ್ಭದಲ್ಲಿ ಮಾರ್ಗದಲ್ಲಿ ಬರುವ ಗ್ರಾಮ ಅಥವಾ ನಗರಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ವಿಶ್ರಾಂತಿಗೆ ಅವಕಾಶ ಒದಗಿಸಬೇಕು ಎಂದು ಆಗ್ರಹಿಸಿದರು.

ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಿಂದೆ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಅಂದಿನ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು.

ಸುವರ್ಣ ಸೌಧದ ಎದುರು ಸತ್ಯಾಗ್ರಹ ಕೈಗೊಂಡಿದ್ದಾಗ ಅಂದಿನ ಉಪ ಮುಖ್ಯಮಂತ್ರಿ ಹಾಗೂ ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಸಹ ಬೇಡಿಕೆ ಈಡೇರಿಕೆಯ ಭರವಸೆ ನೀಡಿದ್ದರು. ಆದರೆ, ಅವರು ನಮ್ಮ ಬೇಡಿಕೆಗಳನ್ನು ಮರೆತುಬಿಟ್ಟರು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೀಗ, ಮತ್ತೊಮ್ಮೆ ಸಿಎಂ ಡಿ.ಕೆ. ಶಿವಕುಮಾರ ಅವರಿಗೆ ಪತ್ರೆ ಬರೆದಿದ್ದು, ಬೇಡಿಕೆಗಳ ಬಗ್ಗೆ ನೆನಪಿಸಲಾಗಿದೆ ಎಂದರು.

10 ದಿನದೊಳಗೆ ಬೇಡಿಕೆ ಈಡೇರದಿದ್ದಲ್ಲಿ ನ. 10ರಂದು ವರೂರಿನಿಂದ ಚಿಕ್ಕೋಡಿಗೆ ಪಾದಯಾತ್ರೆ ಕೈಗೊಳ್ಳುತ್ತೇನೆ. ಚಿಕ್ಕೋಡಿಯಿಂದ ನ. 30ರಂದು ಬೆಳಗಾವಿ ಸುವರ್ಣ ಸೌಧದವರೆಗೂ ಪಾದಯಾತ್ರೆ ನಡೆಸುತ್ತೇನೆ. ಮಾರ್ಗ ಮಧ್ಯೆ ಆಯಾ ಭಾಗದ ಶಾಸಕರಿಗೆ ಮನವಿ ಸಲ್ಲಿಸಲಾಗುವುದು. ನಂತರ ಸುವರ್ಣ ಸೌಧದ ಎದುರು ಸತ್ಯಾಗ್ರಹ ನಡೆಸುತ್ತೇನೆ. ಆಗಲೂ ಸರ್ಕಾರದ ನಿರ್ಲಕ್ಷ್ಯ ವಹಿಸಿದರೆ ಅನ್ನ, ನೀರು ಬಿಟ್ಟು ಸಲ್ಲೇಖನ ವ್ರತ ಕೈಗೊಂಡು ದೇಹತ್ಯಾಗ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಒಂದು ವೇಳೆ ಸರ್ಕಾರ ಪೊಲೀಸರ ಮೂಲಕ ನಮ್ಮ ಪಾದಯಾತ್ರೆಯನ್ನು ತಡೆಯಲು ಪ್ರಯತ್ನಿಸಿದರೆ, ಯಾವ ಸ್ಥಳದಲ್ಲಿ ಪಾದಯಾತ್ರೆ ತಡೆಯುತ್ತಾರೋ, ಅದೇ ಜಾಗದಲ್ಲಿ ಸಲ್ಲೇಖನ ವ್ರತ ಕೈಗೊಳ್ಳುವುದಾಗಿ ತಿಳಿಸಿದರು.

ನಮ್ಮ ಹೋರಾಟ ಶಾಂತಿಯುತವಾಗಿ ಇರುತ್ತದೆ. ಸರ್ಕಾರ, ಜನಪ್ರತಿನಿಧಿಗಳ ವಿರುದ್ಧ ಘೊಷಣೆ ಕೂಗುವುದಿಲ್ಲ. ಅಹಿಂಸಾತ್ಮಕವಾಗಿ ಹೋರಾಟ ನಡೆಸಲಾಗುವುದು. ಕಳೆದ ಮೂರು ವರ್ಷಗಳಿಂದ ಸರ್ಕಾರಕ್ಕೆ ಮನವಿ ನೀಡುತ್ತ ಬಂದಿದ್ದೇವೆ. ಈ ಮಧ್ಯೆ ಹಲವಾರು ಸಮಾಜಗಳ ಅಭಿವೃದ್ಧಿ ನಿಗಮಗಳನ್ನು ರಚಿಸಿದ್ದರೂ, ಜೈನ ಸಮಾಜದ ಬಗ್ಗೆ ನಿರ್ಲಕ್ಷ್ಯ ಮುಂದುವರಿದಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net