ಧರ್ಮಗಳು ನಾಡಿನಲ್ಲಿ ಸಾಮರಸ್ಯ ನೀಡಿವೆ

ಕವಿವಿ ಸುವರ್ಣ ಮಹೋತ್ಸವ ಸಭಾಭವನದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ
ಕವಿವಿ ಸುವರ್ಣ ಮಹೋತ್ಸವ ಸಭಾಭವನದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ
Published on
ಧಾರವಾಡ: ಕನ್ನಡ ನಾಡಿನಲ್ಲಿ ಹಲವಾರು ಧರ್ಮಗಳು ಸಾಮರಸ್ಯದ ಬಾಳ್ವೆಯ ಅರಿವು ಮತ್ತು ಅನುಭಾವವನ್ನು ನೀಡಿದವು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಬಸವರಾಜ ಕಲ್ಗುಡಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿಶ್ವವಿದ್ಯಾಲಯದ ಬಸವೇಶ್ವರ ಪೀಠವು ಕವಿವಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ `ಕನ್ನಡ ಸಾಹಿತ್ಯ ಪರಂಪರೆ ಮತ್ತು ಅನುಭಾವ' ವಿಷಯದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಸಾಮರಸ್ಯ ಹೊಂದಿದ ಜೀವನ ನಡೆಸಲು ಅನೇಕ ಧರ್ಮಗಳು ತಾತ್ವಿಕ ಚಿಂತನೆಗಳನ್ನು ಹೊಂದಿವೆ. ಕೇರಳದಲ್ಲಿ ನಾರಾಯಣ ಗುರು ಅವರು ಅದ್ವೈತ ಸಿದ್ಧಾಂತ ಬಳಸಿಕೊಂಡು ಆಂದೋಲನ ಮತ್ತು ಕಾಂತ್ರಿಯ ಮೂಲಕ ಅಮಾನವೀಯ ಕೃತ್ಯದ ಕುರಿತು ಪ್ರತಿಭಟಿಸಿದರು.
ದೇಶದಲ್ಲಿ ಅನೇಕ ತಾತ್ವಿಕ ಧಾರ್ಮಿಕ ಚಿಂತನೆಗಳು ತಮ್ಮದೇ ವಿಚಾರ, ತತ್ವಗಳನ್ನು ನೀಡಿದವು. ಕೆಲವು ತಾತ್ವಿಕ ಚಿಂತನೆಗಳು ಶ್ರೇಣಿಕೃತ ಸಮಾಜ ನಿರ್ಮಾಣ ಮಾಡಿದವು. ಜೈನ ಮತ್ತು ಬೌದ್ಧ ಧರ್ಮಗಳು ಕನ್ನಡ ನಾಡಿನಲ್ಲಿ ಸಮರಸದ ಬಾಳ್ವೆಯ ಅರಿವನ್ನು ನೀಡಿದವು ಅಲ್ಲಮ ಮತ್ತು ಮುಧುರ ಚೆನ್ನರು ಜ್ಞಾನ ಮತ್ತು ಅರಿವಿನ ಸಾಮರಸ್ಯ ನಡೆಸಲು ವಿಶೇಷ ಸಂದೇಶ ನೀಡಿದರು. ಉತ್ತರ ಕರ್ನಾಟಕವು ತನ್ನದೇ ಆದ ಕನ್ನಡ ಸಾಹಿತ್ಯದ ಪರಂಪರೆ ಮೂಲಕ ಸೌಹಾರ್ದತೆ, ಸಹನೆ, ಸಾಮರಸ್ಯವನ್ನು ಒಳಗೊಂಡಿದೆ ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವ ಪ್ರೊ. ಎ.ಎಚ್.ಅಗಡಿ ಮಾತನಾಡಿದರು. ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್ ಅಧ್ಯಕ್ಷತೆ ವಹಿಸಿದ್ದರು.
ಬೆಳಗಾವಿ ಜೆ.ಎನ್.ಎಂ.ಸಿ. ವಿಶ್ವವಿದ್ಯಾಲಯ ಡಾ. ಅವಿನಾಶ ಕವಿ, ತುಮಕೂರು ವಿವಿ ಪ್ರಾಧ್ಯಾಪಕಿ ಡಾ. ಗೀತಾ ವಸಂತ ಅವರು `ದಾಸ ಸಾಹಿತ್ಯದಲ್ಲಿ ಅನುಭಾವ' ಎಂಬ ವಿಷಯದ ಕುರಿತು, ಹಂಪಿ ವಿವಿ ಪ್ರಾಧ್ಯಾಪಕ ಪ್ರೊ. ವೆಂಕಟಗಿರಿ ದಳವಾಯಿ ಅವರು `ತಳಸಮುದಾಯದ ಸಾಹಿತ್ಯದಲ್ಲಿ ಅನುಭಾವ' ವಿಷಯದ ಕುರಿತು ತಾಂತ್ರಿಕ ಗೋಷ್ಠಿಯಲ್ಲಿ ಮಾತನಾಡಿದರು.
ಕವಿವಿ ಪ್ರಭಾರ ಕುಲಸಚಿವ ಪ್ರೊ. ಎ.ಎಚ್. ಅಗಡಿ, ಕವಿವಿ ಮೌಲ್ಯಮಾಪನ ಕುಲಸಚಿವ ಡಾ. ಎ.ಎಂ. ಕಡಕೋಳ, ಕವಿವಿ ಬಸವೇಶ್ವರ ಪೀಠದ ಸಂಯೋಜಕ ಡಾ. ನಿಜಲಿಂಗಪ್ಪ ಮಟ್ಟಿಹಾಳ, ಸಿಂಡಿಕೇಟ್ ಸದಸ್ಯ ಶ್ಯಾಮ ಮಲ್ಲನಗೌಡರ, ರಾಬರ್ಟ್ ದದ್ದಾಪೂರಿ, ಪ್ರೊ. ವೀರಣ್ಣ ರಾಜೂರ, ಡಾ. ಕೆ.ಆರ್. ದುರ್ಗಾದಾಸ, ಡಾ. ಈರಣ್ಣ ಇಂಜನಗೇರಿ, ಪ್ರೊ. ಶಿರಾಳಶೆಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net