ಹುಬ್ಬಳ್ಳಿ : rani abbakka ಬಹಳ ದಿನಗಳ ನಂತರ ಮಹಾನಗರದಲ್ಲಿ ದೊಡ್ಡಾಟವೊಂದು ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು. ಅದರಲ್ಲೂ ವೀರರಾಣಿ ಅಬ್ಬಕ್ಕನ ಅಬ್ಬರ ಪ್ರೇಕ್ಷಕರ ಮೈ ಜುಮ್ಮೆನ್ನಿಸಿತು.
ಸಂಸ್ಕಾರ ಭಾರತಿ, ಹುಬ್ಬಳ್ಳಿ ಧಾರವಾಡ ಬಂಟರ ಸಂಘ ಸಂಯುಕ್ತವಾಗಿ ಭರತಮುನಿ ಸಂಸ್ಮರಣೆ ಪ್ರಯುಕ್ತ ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ವೀರರಾಣಿ ಅಬ್ಬಕ್ಕ ದೊಡ್ಡಾಟ ಮತ್ತೊಮ್ಮೆ ಐತಿಹಾಸಿಕ ಪರಂಪರೆಯನ್ನು ಕಣ್ಮುಂದೆ ತಂದಿತು.
ದೊಡ್ಡಾಟ ಕಲೆ ತೆರೆಮರೆಗೆ ಸರಿಯುವ ಸಂದರ್ಭದಲ್ಲಿ ಹೆಣ್ಣು ಮಕ್ಕಳೇ ಎಲ್ಲ ಪಾತ್ರಗಳನ್ನು ನಿಭಾಯಿಸುವ ಮೂಲಕ ವೇದಿಕೆಯಲ್ಲಿ ದೊಡ್ಡಾಟದ ಖದರ್ ತೋರಿಸಿದರು.
ಪ್ರತಿಯೊಬ್ಬ ಪಾತ್ರಧಾರಿಗಳ ಮಾತುಗಾರಿಕೆ, ಹಿಮ್ಮೇಳದ ಸಾಥ್ ಎಲ್ಲವೂ ಪ್ರೇಕ್ಷಕರು ಅತ್ತಿತ್ತ ಅಲುಗಾಡದಂತೆ ಪ್ರದರ್ಶನ ಮುಗಿಯುವವರೆಗೂ ಕುತೂಹಲ ಹೆಚ್ಚಿಸಿದರು. ನಾಟಕ ಪ್ರೇಮಿಗಳು ಚಪ್ಪಾಳೆಯ ಮೂಲಕ ಹುರಿದುಂಬಿಸಿದ್ದು ವಿಶೇಷವಾಗಿತ್ತು.
ಪೋರ್ಚುಗೀಸರು ಕರಾವಳಿ ಮೂಲಕ ಆಗಮಿಸಿ ಇಲ್ಲಿನ ರಾಜರ ಮೇಲೆ ಕಪ್ಪಕ್ಕಾಗಿ ಒತ್ತಡ ಹೇರಲಾರಂಭಿಸುತ್ತಾರೆ. ಅನೇಕ ಅರಸರು ಕಪ್ಪ ಕೊಟ್ಟು ಸುಮ್ಮನಾಗುತ್ತಾರೆ. ಆದರೆ, ರಾಣಿ ಅಬ್ಬಕ್ಕ ಒಪ್ಪದೇ ವೀರಾವೇಷದಿಂದ ಹೋರಾಡುತ್ತಾಳೆ. ಸಮುದ್ರ ಸಿಂಹಿಣಿ ಎಂದೇ ಬಿಂಬಿತಳಾದ ಅಬ್ಬಕ್ಕಳು ಯುದ್ಧ ಮಾಡಿ ಸಾಮ್ರಾಜ್ಯ ಉಳಿಸಿಕೊಂಡ ಕಥೆಯನ್ನು ಅತ್ಯುತ್ತಮವಾಗಿ ದೊಡ್ಡಾಟದ ಮೂಲಕ ವೇದಿಕೆಗೆ ತರಲಾಗಿತ್ತು.
ವೈರಿಗಳನ್ನು ಸದೆ ಬಡಿದು ಹರ್ ಹರ್ ಮಹಾದೇವ ಎಂದು ಅಬ್ಬಕ್ಕ ಘೋಷಣೆ ಕೂಗಿ ರೋಮಾಂಚನಗೊಳಿಸಿದರು.
ಡಾ. ಹಜರೇಸಾಬ ನದಾಫ್ ಅವರ ಸಾಹಿತ್ಯ, ಬೀರೇಶ ತಳ್ಳಿಕೇರಿ ಅವರ ಸಂಯೋಜನೆಯಲ್ಲಿ ಮೂಡಿಬಂದ ನಾಟಕಕ್ಕೆ ರಮೇಶ ಕರಬಮ್ಮನವರ ನಿರ್ದೇಶನ ಮಾಡಿದ್ದರು.
ಭಾಗವತರಾಗಿ ಚಂದ್ರಶೇಖರಯ್ಯ, ಚನ್ನಪ್ಪ ಮೇಟಿ, ವೀರಭದ್ರಯ್ಯ ಗುರಯ್ಯ, ರಮೇಶ ಭಜಂತ್ರಿ ಇತರರು ಅತ್ತುತ್ತಮ ಸಾಥ್ ನೀಡಿ ನಾಟಕಕ್ಕೆ ಮೆರಗು ತಂದರು. ಐತಿಹಾಸಿಕ ನಾಟಕವು ಜಾನಪದ ಮನಸುಗಳಿಗೆ ಸಂತೋಷ ತಂದಿತು.
ಉದ್ಘಾಟನೆ ಕಾರ್ಯಕ್ರಮದಲ್ಲಿ ಶ್ರೀನಿವಾಸ, ಸುಭಾಸ ನರೇಂದ್ರ, ಶಶಿಧರ ನರೇಂದ್ರ, ಹೇಮಾ ವಾಘ್ಮೋಡೆ, ವಿನಯ ನಾಯಕ, ಸುಜಯ ಶಾನಬಾಗ, ಹರ್ಷ ಶೆಟ್ಟಿ ಇತರರು ಪಾಲ್ಗೊಂಡಿದ್ದರು.