ಹಲವಾರು ಸ್ಥಭ್ಧ ಚಿತ್ರಗಳು, ಐತಿಹಾಸಿಕ ಪುರುಷರು ಹಾಗೂ ವೀರರ ವೇಷಭೂಷಣ ತೊಟ್ಟ ಚಿಣ್ಣರು, ಡೋಲು, ಜಾಂಜ್, ಕರಡಿ ಮಜಲು ಮತ್ತಿತರ ವಾದ್ಯಗಳೊಂದಿಗೆ ಶ್ರೀಮಠದ ಆವರಣದಿಂದ ಹೊರಟ ಮೆರವಣಿಗೆ, ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ನೆಹರು ಮೈದಾನದಲ್ಲಿ ಕೊನೆಗೊಂಡಿತು. ಹಳದಿ ಹಾಗೂ ಕೆಂಪು ಮಿಶ್ರಿತ ಪೇಟ ತೊಟ್ಟಿದ್ದ ಪುರುಷರು, ಮಹಿಳೆಯರು ಮೆರವಣಿಗೆ ಉದ್ದಕ್ಕೂ ಸಾಗಿದರು. ಮಹಾನಗರ ಪಾಲಿಕೆ ಸದಸ್ಯರು, ಅಧಿಕಾರಿಗಳು, ವಿವಿಧ ಕನ್ನಡಪರ ಸಂಘಟನೆಗಳ ಸದಸ್ಯರು, ಆಟೋ ಚಾಲಕರು, ಸಾರ್ವಜನಿಕರು ಮೆರವಣಿಗೆಯಲ್ಲಿ ಸಂಚರಿಸಿ, ಕನ್ನಡ ನೆಲ, ಭಾಷೆಗೆ ಜಯಘೋಷಗಳನ್ನು ಕೂಗಿದರು.