ನೈಋತ್ಯ ರೈಲ್ವೆ (Railway) ವಲಯದಿಂದ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾತಿನ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಂಘಕ್ಕೆ ಸೇವೆ ಸಲ್ಲಿಸಿದವರೊಂದಿಗೆ ವಲಯದ ಜಿಎಂ ಮುಕುಲ್ ಸರನ್ ಮಾಥುರ, ಸತ್ಯಪ್ರಕಾಶ ಶಾಸ್ತ್ರಿ, ಡಾ. ಮಂಜುನಾಥ ಕನಮಡಿ ಹಾಗೂ ಇತರರು ಇದ್ದಾರೆ.
ಉದ್ಘಾಟಿಸಿ ಮಾತನಾಡಿದ ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಮುಕುಲ್ ಸರನ್ ಮಾಥುರ, ಕರ್ನಾಟಕದ ಗತವೈಭವದ ಐತಿಹಾಸಿಕ ಕ್ಷೇತ್ರಗಳಿಗೆ ರೈಲು ಸಂಪರ್ಕ ಒದಗಿಸುವ ಮೂಲಕ ನೈಋತ್ಯ ರೈಲ್ವೆಯು ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಶೇ 100ರಷ್ಟು ಶ್ರಮ ವಹಿಸುತ್ತಿದೆ ಎಂದು ಹೇಳಿದರು.
ಕನ್ನಡದ ಕಲೆ, ಸಂಗೀತ, ಸಾಹಿತ್ಯ ಮತ್ತು ಚಿತ್ರೋದ್ಯಮವನ್ನು ಶ್ಲಾಘಿಸಿದರು. ನೈಋತ್ಯ ರೈಲ್ವೆ ವಲಯದ ಸಿಬ್ಬಂದಿಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಜತೆಗೆ ಕನ್ನಡವನ್ನೂ ಪ್ರಥಮ ಪ್ರಾಶಸ್ತ್ಯ ಭಾಷೆಯಾಗಿ ಮುನ್ನಡೆಸಲು ಕಾಳಜಿ ವಹಿಸುತ್ತಿರುವುದಾಗಿ ತಿಳಿಸಿದರು.
ನೈಋತ್ಯ ರೈಲ್ವೆ ಪ್ರಧಾನ ವಾಣಿಜ್ಯ ವ್ಯವಸ್ಥಾಪಕ ಸತ್ಯ ಪ್ರಕಾಶ ಶಾಸ್ತ್ರಿ ಮಾತನಾಡಿ, ಇಲಾಖೆಯು ವೇಗದ ಮತ್ತು ಸಮಯಕ್ಕೆ ಸರಿಯಾದ ರೈಲು ಕಾರ್ಯುಚರಣೆ ಮೂಲಕ ಸುಗಮ ಪ್ರಯಾಣಕ್ಕೆ ಅನುಕೂಲ ಕಲ್ಪಿಸಿದೆ. ಇನ್ನಷ್ಟು ಕನ್ನಡಿಗರಿಗೆ ರೈಲ್ವೆ ಸೇವೆ ನೀಡಲು ಬದ್ಧವಾಗಿದೆ ಎಂದರು.
ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಭಾಷಾ ಸಂಘರ್ಷಕ್ಕಿಂತ ಸಹಿಷ್ಣುತೆ ಮುಖ್ಯ ಎಂದು ಹೇಳಿದರು.
ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ, ಮಾತೃಭಾಷೆಯ ಮಹತ್ವ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಂಘದ ಅಧ್ಯಕ್ಷ ಶಿವಕುಮಾರ ಬಿ. ಎಲ್. ಮಾತನಾಡಿ, ಸಂಘದ ಚಟುವಟಿಕೆಗಳು ಹಾಗೂ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಯುವ ಪೀಳಿಗೆಗೆ ವರ್ಗಾಯಿಸುವ ಅಗತ್ಯದ ಬಗ್ಗೆ ವಿವರಿಸಿದರು.
ಪ್ರಧಾನ ಕಾರ್ಯದರ್ಶಿ ಶಂಭುಲಿಂಗ ಬಿರಾದಾರ ಸಂಘದ ವಾರ್ಷಿಕ ವರದಿ ವಾಚಿಸಿದರು.
ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಂಘಕ್ಕೆ ಸೇವೆ ಸಲ್ಲಿಸಿದ ಮಹನೀಯರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ನಂತರ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಇದಕ್ಕೂ ಮೊದಲು ಕನ್ನಡ ನಾಡಿನ ಕಲೆ ಮತ್ತು ಸಂಸ್ಕೃತಿ ಬಿಂಬಿಸುವ ಭವ್ಯ ಬೈಕ್ ರ್ಯಾಲಿಯು ನೈಋತ್ಯ ರೈಲ್ವೆ ಕನ್ನಡ ಸಂಘದಿಂದ ಚಾಲುಕ್ಯ ಇನ್ಸ್ಟಿಟ್ಯೂಟ್ವರೆಗೆ ನಡೆಯಿತು.
ಸಂಘದ ಖಜಾಂಚಿ ಆದಯ್ಯ ಹಿರೇಮಠ, ಪ್ರಾಣೇಶ ಚಂದ್ರಶೇಖರ, ಜಯರಾಮ, ಕಿರಣ ರಾಠೋಡ, ಮೈಲಾರಲಿಂಗ ಕಬ್ಬೂರ ಹಾಗೂ ಇತರರಿದ್ದರು. ಚನ್ನಬಸಪ್ಪ ಚೌಗಲಾ ನಿರೂಪಿಸಿದರು. ಮಾಗೊಂಡಪ್ಪ ವಂದಿಸಿದರು.