rain damages ಮಹಾನಗರದಲ್ಲಿ ಮಳೆ ತಂದ ದುಸ್ಥಿತಿ

rain damages ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ ಫ್ಲೈ ಓವರ್​ ಕಾಮಗಾರಿ ಆರಂಭವಾದಾಗಿನಿಂದ ರಸ್ತೆ ಅವಸ್ಥೆ.
rain damages ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ ಫ್ಲೈ ಓವರ್​ ಕಾಮಗಾರಿ ಆರಂಭವಾದಾಗಿನಿಂದ ರಸ್ತೆ ಅವಸ್ಥೆ.
Published on

ಪ್ರಮುಖ ಮುಖ್ಯಾಂಶಗಳು

  • ಕ್ಷಣದಲ್ಲೇ ಜಲಾವೃತವಾಗುವ ರಸ್ತೆಗಳು
  • ಬಿಸಿಲಾದರೆ ಧೂಳುಮಯ
ಹುಬ್ಬಳ್ಳಿ: rain damages ಹುಬ್ಬಳ್ಳಿ ಧಾರವಾಡ ಅವಳಿನಗರದ ರಸ್ತೆಗಳೇ ಹಾಗೆ, ಮಳೆ ಬಂದರೆ ಜಲಾವೃತವಾಗುತ್ತವೆ, ಒಂದಿಷ್ಟು ಬಿಸಿಲು ಬಿದ್ದರೆ ಧೂಳೆಬ್ಬಿಸುತ್ತವೆ. ಇದು ಮಹಾನಗರದ ಜನತೆ ದಶಕಗಳಿಂದ ಅನುಭವಿಸುತ್ತಿರುವ ಯಾತನೆ.
ಸಾವಿರಾರು ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾರ್ಯಗಳು, ಸ್ಮಾರ್ಟ್​ ಸಿಟಿ ಯೋಜನೆ, ಬಿಆರ್​ಟಿಎಸ್​ ಯೋಜನೆ ಏನೆಲ್ಲ ಬಂದರೂ ಹುಬ್ಬಳ್ಳಿ ನಗರದ ರಸ್ತೆಗಳು ಸುಧಾರಿಸಲಿಲ್ಲ. ಈಗಲೂ ಮಳೆಗಾಲದಲ್ಲಿ ಅನೇಕ ಕಡೆಗಳಲ್ಲಿ ಜಲಾವೃತವಾಗುತ್ತವೆ.
ಅಷ್ಟೊಂದು ಸುವ್ಯವಸ್ಥಿತವಾಗಿ ನಮ್ಮ ಆಡಳಿತ ವ್ಯವಸ್ಥೆ ಯೋಜನೆ ರೂಪಿಸಿ ಜಾರಿ ಮಾಡಿದೆ.ಫ್ಲೈ ಓವರ್ ಕಾಮಗಾರಿ ಆರಂಭವಾದಾಗಿನಿಂದ ಹುಬ್ಬಳ್ಳಿಯ ಚನ್ನಮ್ಮ ವೃತ್ತದತ್ತ ಯಾರೊಬ್ಬರೂ ಹೋಗುವಂತ ಸ್ಥಿತಿ ಉಳಿದಿಲ್ಲ.
ಮೂರು ರಾಷ್ಟ್ರೀಯ ಹೆದ್ದಾರಿಗಳು ಸೇರಿ ಎಂಟು ರಸ್ತೆಗಳು ಸಂಧಿಸುವ ಸರ್ಕಲ್​ ಇದಾಗಿದೆ. ಹಾಗಾಗಿ ಹುಬ್ಬಳ್ಳಿಗೆ ಬರುವ ಬಹುತೇಕ ವಾಹನಗಳು ಈ ಸರ್ಕಲ್​ ಮೂಲಕವೇ ಸಾಗಬೇಕು. ಇಲ್ಲಿ ವಾಹನ, ಜನ ದಟ್ಟಣೆ ಸದಾ ಇರುತ್ತದೆ.
ಇಂತಹ ಬಿಜಿ ಸರ್ಕಲ್​ನಲ್ಲಿ ಇದೀಗ ಮಳೆಗಾಲ ಆರಂಭವಾದಾಗಿನಿಂದ ವಾಹನ ಸವಾರರು, ಪಾದಚಾರಿಗಳು ಇನ್ನಿಲ್ಲದ ಸಂಕಷ್ಟ ಎದುರಿಸುತ್ತಿದ್ದಾರೆ. ಚನ್ನಮ್ಮ ವೃತ್ತವು ಕೆಸರು ಗದ್ದೆಯಂತಾಗಿದೆ. ದೊಡ್ಡ ವಾಹನಗಳು ಹೇಗೋ ದಾಟುತ್ತವೆ. ಬೈಕ್​ ಸವಾರರು, ಪಾದಚಾರಿಗಳು ಓಡಾಡಲು ಬಹಳಷ್ಟು ತೊಂದರೆ ಪಡುತ್ತಿದ್ದಾರೆ.
ಬಸ್​ ನಿಲ್ದಾಣ ಎದುರಿನ ರಸ್ತೆಗಳು ಅವ್ಯವಸ್ಥೆಯ ಗೂಡಾಗಿವೆ. ಕೋರ್ಟ್​ ಸರ್ಕಲ್​ನಲ್ಲಿ ಕಾಂಕ್ರಿಟ್​ ರೋಡ್​ನಲ್ಲಿ ಕಬ್ಬಿಣದ ಸರಳುಗಳು ಹೊರಗೆ ಕಾಣಿಸುತ್ತಿವೆ. ವಾಹನಗಳ ಟೈರ್​ ಸಿಡಿಯುವ ಅಪಾಯವಿದೆ.
ಸಂಗೋಳ್ಳಿ ರಾಯಣ್ಣ ಸರ್ಕಲ್​, ಹಳೇ ಕೋರ್ಟ್​ ಸರ್ಕಲ್​, ದೇಸಾಯಿ ಸರ್ಕಲ್​, ಹೊಸೂರ ಸರ್ಕಲ್​ ಹೀಗೆ ಯಾವುದೇ ಸರ್ಕಲ್​ಗೆ ಹೋದರೂ ಸಮಸ್ಯೆ ಇದ್ದದ್ದೆ. ಮಳೆ ಬಂದಾಗ ಈ ವೃತ್ತಗಳಲ್ಲಿ ಸುಗಮ ಸಂಚಾರಕ್ಕೆ ಅವಕಾಶವೇ ಇರುವುದಿಲ್ಲ. ತಾಸುಗಟ್ಟಲೇ ಕಾದು ನೀರು ಸರಿದ ಮೇಲೆ ಹೋಗಬೇಕು.

ಗಟಾರುಗಳು ಕ್ಲೀನ್​ ಇಲ್ಲ

ನಗರದ ಬಹುತೇಕ ಕಡೆಗಳಲ್ಲಿ ಗಟಾರುಗಳನ್ನು ಕ್ಲೀನ್​ ಮಾಡಿಲ್ಲ. ಮುಳ್ಳು ಕಂಟಿಗಳು ಆವರಿಸಿವೆ. ಹೂಳು ತುಂಬಿದ್ದರೂ ತೆಗೆದು ಬೇರೆಡೆ ಸಾಗಿಸಿಲ್ಲ. ಇದರಿಂದ ಸ್ವಲ್ಪ ಮಳೆ ಬಂದರೂ ಗಟಾರುಗಳು ತುಂಬಿ ಕೊಳಗೆ ರಸ್ತೆಗೆ ಬರುತ್ತದೆ. ಅದರಲ್ಲೂ ಬಿಆರ್​ಟಿಎಸ್​ ಕಾರಿಡಾರ್​ನಲ್ಲಿ ಈ ಸಮಸ್ಯೆ ಬಹು ದೊಡ್ಡದಾಗಿದೆ.

ಹೆಸರಿಗಷ್ಟೇ ಕಾರಿಡಾರ್​

ಬಿಆರ್​ಟಿಎಸ್​ ಕಾರಿಡಾರ್​ ಹೆಸರಿಗೆ ಮಾತ್ರ ದೊಡ್ಡ ರಸ್ತೆ. ಇಲ್ಲಿಯೂ ಸುಗಮ ಸಂಚಾರ ಕನಸಿನ ಮಾತಾಗಿದೆ. ಉಣಕಲ್ಲ ಕ್ರಾಸ್​, ಶ್ರೀನಗರ ಕ್ರಾಸ್​, ಭೈರಿದೇವರಕೊಪ್ಪ ಅಮರಗೋಳ ಕ್ರಾಸ್​ ಹೀಗೆ ಹಲವು ಜಂಕ್ಶನ್​ಗಳಲ್ಲಿ ಮಳೆ ಬಂದಾಗ ರಸ್ತೆ ಜಲಾವೃತವಾಗುತ್ತವೆ. ಹಲವು ವರ್ಷಗಳಿಂದ ಈ ಸಮಸ್ಯೆ ಇದ್ದರೂ ಅಧಿಕಾರಿಗಳು ಸರಿ ಪಡಿಸುವ ಗೋಜಿಗೆ ಹೋಗಿಲ್ಲ. ಪ್ರತಿ ವರ್ಷ ಗಟಾರು ಸ್ವಚ್ಛ ಮಾಡುವುದಕ್ಕಷ್ಟೇ ಸೀಮಿತರಾಗಿದ್ದಾರೆ ಎಂದು ನಾಗರಿಕರು ದೂರಿದ್ದಾರೆ. ಮಳೆ ಸುರಿಯಲು ಆರಂಭಿಸಿದರೆ ರಸ್ತೆಗಳಲ್ಲಿ ತಗ್ಗು-ಗುಂಡಿಗಳು ಎಲ್ಲಿವೆ ಎಂಬುದೇ ಗೊತ್ತಾಗುವುದಿಲ್ಲ.
ಸಿದ್ಧತೆ ಇಲ್ಲ: ಮಹಾನಗರ ಪಾಲಿಕೆಯು ಮಳೆಗಾಲಕ್ಕಾಗಿ ಸಿದ್ಧತೆ ಪೂರ್ಣಗೊಳಿಸಿದಂತೆ ಕಾಣುತ್ತಿಲ್ಲ. ಬಹುತೇಕ ಕಡೆಗಳಲ್ಲಿ ಗಟಾರುಗಳು ಹೂಳು ತುಂಬಿಕೊಂಡಿವೆ. ರಸ್ತೆ ಗುಂಡಿಗಳನ್ನು ಮುಂಚ್ಚುವ ಕೆಲಸ ಮಾಡಿಲ್ಲ. ಇದರಿಂದ ಮುಂಗಾರು ಮಳೆಯಲ್ಲಿ ಬಹಳಷ್ಟು ತೊಂದರೆಗಳನ್ನು ಎದುರಿಸುವಂತಾಗಿದೆ ಎಂದು ನಾಗರಿಕರು ದೂರಿದ್ದಾರೆ.
"

ಮುಂಗಾರು ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ರಾಜಕಾಲುವೆಗಳು, ಚರಂಡಿಗಳು ಹಾಗೂ ಮಳೆ ನೀರು ಹರಿಯುವ ಮಾರ್ಗಗಳನ್ನು ತುರ್ತಾಗಿ ಸ್ವಚ್ಛಗೊಳಿಸಿ ನಗರದಲ್ಲಿ ಸಂಭವಿಸಬಹುದಾದ ಜಲಾವೃತ ಪರಿಸ್ಥಿತಿಯನ್ನು ತಡೆಯುವಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಮನವಿ ಮಾಡಲಾಗಿದೆ.

— ಉದಯ ರೇವಣಕರ, ಕೆಸಿಸಿಐ ಗೌರವ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net