pvr cinema ಹುಬ್ಬಳ್ಳಿಯ ಗೋಕುಲ ರಸ್ತೆ ಇನಾಬಿರ್ಟ್ ಮಾಲ್ನಲ್ಲಿ 7 ಸ್ಕ್ರೀನ್ ಪಿವಿಆರ್ ಸಿನೆಮಾ ಥೇಟರ್ಗಳನ್ನು ನಟಿ ಮಿಶಾ ನಾರಂಗ್, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಉದ್ಘಾಟಿಸಿದರು. ನಿತೇಶ ಶೆಟ್ಟಿ, ಆರ್. ದೇವರಾಜನ್, ರಾಜೇಂದ್ರ ಸಿಂಗ್ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಹುಬ್ಬಳ್ಳಿಯ ಇನಾರ್ಬಿಟ್ ಮಾಲ್ನಲ್ಲಿ ಆರಂಭ
ಉತ್ತರ ಕರ್ನಾಟಕದ ಬೃಹತ್ ಮಲ್ಟಿಫ್ಲೆಕ್ಸ್
ಹುಬ್ಬಳ್ಳಿ: pvr cinema ಉತ್ತರ ಕರ್ನಾಟಕದ ಅತಿ ದೊಡ್ಡ ಹಾಗೂ ಹುಬ್ಬಳ್ಳಿಯ ಬೃಹತ್ ಮಲ್ಟಿಪ್ಲೆಕ್ಸ್, 7 ಸ್ಕ್ರೀನ್ಸ್ ಪಿವಿಆರ್ ಸಿನೆಮಾ ಅದ್ದೂರಿ ಉದ್ಘಾಟನೆ ಸಮಾರಂಭ ಭಾನುವಾರ ನಡೆಯಿತು.
ಇಲ್ಲಿಯ ಗೋಕುಲ ರಸ್ತೆ ಇನಾರ್ಬಿಟ್ ಮಾಲ್ನಲ್ಲಿ ಏರ್ಪಡಿಸಿದ್ದ ವರ್ಣರಂಜಿತ ಕಾರ್ಯಕ್ರಮಕ್ಕೆ ಸರಳ ಸುಬ್ಬರಾವ್ ಕನ್ನಡ ಚಿತ್ರದ ನಾಯಕನಟಿ ಮಿಶಾ ನಾರಂಗ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಂಗಳೂರು ನಂತರ ಹುಬ್ಬಳ್ಳಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಪಿವಿಆರ್ ಸಿನೆಮಾ ಪರಿಚಯಿಸಲಾಗಿದೆ. ಇದೊಂದು ಅದ್ಭುತ ಸೌಂಡ್ನೊಂದಿಗೆ ಚಿತ್ರ ನೋಡುವ ಅನುಭವ ನೀಡುವ ತಾಣವಾಗಿದೆ. ಬಜೆಟ್ ಫ್ರೆಂಡ್ಲಿಯಾಗಿ ಎಲ್ಲರಿಗೂ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿರುವುದು ವಿಶೇಷ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರ ತಂಡ ಬಹಳಷ್ಟು ಶ್ರಮ ಪಟ್ಟು ಸಿನೆಮಾ ನಿರ್ಮಾಣ ಮಾಡುತ್ತದೆ. ಆದರೆ, ಅದನ್ನು ಜನರಿಗೆ ತಲುಪಿಸುವ ಕೆಲಸ ಥೇಟರ್ಗಳು ಮಾಡುತ್ತವೆ. ಸರಳ ಸುಬ್ಬರಾವ್ ಚಿತ್ರ ಅತ್ಯುತ್ತಮವಾಗಿ ಮೂಡಿ ಬಂದಿದೆ. ಕನ್ನಡ ಸಿನೆಮಾ ಹೆಚ್ಚು ನೋಡುವ ಮೂಲಕ ಪ್ರೋತ್ಸಾಹಿಸಬೇಕು. ಕನ್ನಡ ಚಿತ್ರೋದ್ಯಮ ನಿಂತಿರುವುದೇ ಪ್ರೇಕ್ಷಕರ ಬೆಂಬಲದ ಮೇಲೆ ಎಂದು ಅಭಿಪ್ರಾಯಪಟ್ಟರು.
ಅತಿಥಿಯಾಗಿದ್ದ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಮಾತನಾಡಿ, ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮನೋರಂಜನೆಯ ಅವಕಾಶಗಳು ಬೆಳೆಯುತ್ತಿವೆ. ಪಿಎಕ್ಸ್ ಎಲ್ ಬೃಹತ್ ಸ್ಕ್ರೀನ್ ಸವಲತ್ತು ಇಲ್ಲಿನ ಜನರಿಗೂ ಅವಶ್ಯಕತೆ ಇತ್ತು. ಇದೀಗ ಬಂದಿರುವುದಕ್ಕೆ ಚಿತ್ರ ಪ್ರೇಮಿಗಳು ಖುಷಿಯಾಗಿದ್ದಾರೆ. ಇಂತಹ ಉತ್ತಮ ವೇದಿಕೆ ಕಲ್ಪಿಸಿದ ಪಿವಿಆರ್ ಗೆ ಅಭಿನಂದನೆ ಸಲ್ಲಿಸುವೆ. ಇಲ್ಲಿ ಪ್ರದರ್ಶನಗೊಳ್ಳುವ ಸರಳ ಸುಬ್ಬರಾವ್ ಸೇರಿ ಎಲ್ಲ ಸಿನೆಮಾಗಳಿಗೆ ಒಳ್ಳೆಯದಾಗಲಿ ಎಂದರು.
ಇನಾರ್ಬಿಟ್ ಮಾಲ್ ಸೆಂಟರ್ ಹೆಡ್ ನಿತೇಶ್ ಶೆಟ್ಟಿ ಮಾತನಾಡಿ, ಇದು ಅತ್ಯಂತ ಸಂತೋಷದ ಕ್ಷಣ. ಮೊದಲ ಬಾರಿ ಹುಬ್ಬಳ್ಳಿಗೆ ದೊಡ್ಡ ಸ್ಕ್ರೀನ್ ತಂದಿದ್ದೇವೆ. ಮಲೇಷಿಯಾದಿಂದ ಆಮದು ಮಾಡಿಕೊಂಡು ಆಸನಗಳನ್ನು ವ್ಯವಸ್ಥೆ ಮಾಡಲಾಗಿದೆ. ಈ ಮಾಲ್ನಲ್ಲಿ ಸಿನೆಮಾ ಸ್ಕ್ರೀನಿಂಗ್ ಮಾಡುತ್ತಿರುವ ಪಿವಿಆರ್ ತಂಡಕ್ಕೆ ಅಭಿನಂದನೆ ಸಲ್ಲಿಸುವೆ ಎಂದರು.
ಪಿವಿಆರ್ ಐನೊಕ್ಸ್ ಲಿಮಿಟೆಡ್ನ ಆರ್. ದೇವರಾಜನ್ ಮಾತನಾಡಿ, ಹುಬ್ಬಳ್ಳಿಯ ಮೊದಲ ಲೇಜರ್ ಪ್ರೊಜೆಕ್ಶನ್ ಇದಾಗಿದೆ. ಒಟ್ಟು 1086 ಸೀಟ್ಗಳ ವ್ಯವಸ್ಥೆ ಮಾಡಲಾಗಿದೆ. ಬಹುದೊಡ್ಡ ಸ್ಕ್ರೀನ್ ಜತೆ ಸುಖಾನುಭವದಲ್ಲಿ ಚಿತ್ರ ವೀಕ್ಷಣೆ ಮಾಡಬಹುದು ಎಂದರು.
ಪಿವಿಆರ್ ವಲಯ ಮುಖ್ಯಸ್ಥ ರಾಜೇಂದ್ರ ಸಿಂಗ್ ಮಾತನಾಡಿ, ಬೆಂಗಳೂರು ಹೊರತು ಪಡಿಸಿದರೆ ಉತ್ತರ ಕರ್ನಾಟಕದಲ್ಲಿ ಇದೇ ಮೊದಲು ಅತ್ಯುತ್ತಮ ಸವಲತ್ತು ಇಲ್ಲಿ ಕಲ್ಪಿಸಲಾಗಿದೆ. ಇದನ್ನು ಸದುಪಯೋಗ ಪಡೆದುಕೊಳ್ಳಬೇಕು. 26 ಅಡಿ ಎತ್ತರದ ಕರ್ವ್ ಸ್ಕ್ರೀನ್ ಇದಾಗಿದೆ. ಇಂತಹ ಸೌಲಭ್ಯ ಇಲ್ಲಿನ ಜನರಿಗೆ ಅಗತ್ಯವಿತ್ತು. ಪ್ರಿಮಿಯರ್ ಎಕ್ಟ್ರಾ ಲಾರ್ಜ್ (ಪಿಎಕ್ಸ್ ಎಲ್) ಪ್ರೇಕ್ಷಕರಿಗೆ ವಿನೂತನ ಅನುಭವ ನೀಡಲಿದೆ ಎಂದರು.