ಸಾರ್ವಜನಿಕ ಗಣೇಶ ವಿಸರ್ಜನೆ 12ನೇ ದಿನಕ್ಕೆ ganesh

ganesh ಗಣೇಶೋತ್ಸವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಹುಬ್ಬಳ್ಳಿ ಕಚೇರಿಯಲ್ಲಿ ಆಯೋಜಿಸಿದ್ದ ಗಣೇಶ ಮಹಾಮಂಡಳಗಳ ಹಾಗೂ ವಿವಿಧ ಇಲಾಖೆಗಳ ಸಮನ್ವಯ ಸಭೆಯಲ್ಲಿ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಮಾತನಾಡಿದರು.
ganesh ಗಣೇಶೋತ್ಸವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಹುಬ್ಬಳ್ಳಿ ಕಚೇರಿಯಲ್ಲಿ ಆಯೋಜಿಸಿದ್ದ ಗಣೇಶ ಮಹಾಮಂಡಳಗಳ ಹಾಗೂ ವಿವಿಧ ಇಲಾಖೆಗಳ ಸಮನ್ವಯ ಸಭೆಯಲ್ಲಿ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕ ಮಾಸದ ಹಿನ್ನೆಲೆಯಲ್ಲ ಬದಲಾದ ದಿನ
  • 18 ಅಡಿಗಳಿಗಿಂತ ಎತ್ತರದ ಗಣೇಶ ಮೂರ್ತಿಗಳ ಮೆರವಣಿಗೆಗೆ ಪರ್ಯಾಯ ಮಾರ್ಗ ಕಲ್ಪಿಸಬೇಕು
  • ಸಿಂಗಲ್ ವಿಂಡೋದಲ್ಲಿ ಅರ್ಜಿ ಕೊಟ್ಟರೆ ಸಂಬಂಧಿಸಿದ ಇಲಾಖೆಗಳ ಅನುಮತಿ ಪಡೆಯಬಹುದು
ನೆಲಮಟ್ಟದಿಂದ 18 ಅಡಿ ಎತ್ತರದ ಮೂರ್ತಿಗಳು ಮಾತ್ರ ಫ್ಲೈ ಓವರ್ ಕೆಳಗಿಂದ ಮೆರವಣಿಗೆ ನಡೆಸಬಹುದು. 20 ರಿಂದ 25 ಅಡಿ ಎತ್ತರದ ಮೂರ್ತಿಗಳ ಮೆರವಣಿಗೆ ಸಂಗೊಳ್ಳಿ ರಾಯಣ್ಣ ವೃತ್ತ, ಐಬಿ ರಸ್ತೆಯಿಂದ ಸಾಗಬೇಕು.
ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗಣೇಶ ಮಹಾಮಂಡಗಳ ಸಮನ್ವಯ ಸಭೆಯಲ್ಲಿ ನಡೆದ ಚರ್ಚೆಯ ಪ್ರಮುಖ ವಿಷಯಗಳಿವು.
ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಗೆ ವಿವಿಧ ಇಲಾಖೆಗಳಿಗೆ ಅರ್ಜಿ ಹಿಡಿದುಕೊಂಡು ಓಡಾಡುವ ಬದಲು ಸಿಂಗಲ್ ವಿಂಡೋದಲ್ಲಿ ಅರ್ಜಿ ಕೊಟ್ಟರೆ ಸಂಬಂಧಿಸಿದ ಇಲಾಖೆಗಳ ಅನುಮತಿ ಪಡೆಯಬಹುದು ಎಂದು ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಹೇಳಿದರು.
ಪೊಲೀಸ್ ಇಲಾಖೆಯು ಸಹ ಸಿಂಗಲ್ ವಿಂಡೋದಿಂದಲೇ ಅನುಮತಿ ನೀಡಬೇಕು ಎಂದು ಆಯುಕ್ತರು ಸೂಚಿಸಿದರು.
ಹುಬ್ಬಳ್ಳಿಯ ಗ್ಲಾಸ್​ಹೌಸ್, ಹೊಸೂರು ವೃತ್ತ, ಧಾರವಾಡದ ನುಚ್ಚಂಬ್ಲಿ ಬಾವಿಯನ್ನು ಗಣೇಶ ಮೂರ್ತಿ ವಿಸರ್ಜನೆಗಾಗಿ ಸ್ವಚ್ಛಗೊಳಿಸಿ, ಸುಣ್ಣ, ಬಣ್ಣ ಹಚ್ಚುವ ಕಾರ್ಯ ನಡೆಯುತ್ತಿದೆ. ವಿವಿಧ ಬಡಾವಣೆಗಳಲ್ಲಿ ಇರುವ ಬಾವಿಗಳ ಬಗ್ಗೆ ಮಾಹಿತಿ ನೀಡಿದರೆ ಅವುಗಳನ್ನು ಸಹ ಸ್ವಚ್ಛಗೊಳಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಗೌರವ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ಮಾತನಾಡಿ, ಸೆ. 14ರಂದು ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಲಿದೆ.
ವಿಸರ್ಜನೆ ಕಾರ್ಯಕ್ರಮ 5 ದಿನಗಳ ಗಣೇಶ ಮೂರ್ತಿ ಸೆ. 18ಕ್ಕೆ, 7 ದಿನಗಳ ಮೂರ್ತಿ 20ಕ್ಕೆ , 9 ದಿನಗಳ ಮೂರ್ತಿಗಳು 22ರಂದು ನಡೆಯಲಿವೆ. ಅಧಿಕ ಬಂದಿರುವ ಹಿನ್ನೆಲೆಯಲ್ಲಿ 11 ದಿನಗಳ ಬದಲಾಗಿ, 12ನೇ ದಿನಗಳ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ 25ರಂದು ನಡೆಯಲಿದೆ ಎಂದು ವಿವರಿಸಿದರು.
ಹಳೇ ಹುಬ್ಬಳ್ಳಿ ವೃತ್ತದಲ್ಲಿನ ವೃತ್ತ ತೆಗೆದು, ಕೇವಲ ಹೈ ಮಾಸ್ಕ್ ಮಾತ್ರ ಉಳಿಸಿಕೊಳ್ಳಬೇಕು. ಇದರಿಂದ ಆ ಸ್ಥಳದಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಅನುಕೂಲವಾಗಲಿದೆ.
ಗಣೇಶ ಮೂರ್ತಿಗಳ ಮೆರವಣಿಗೆ ತೆರಳುವ ರಸ್ತೆಗಳನ್ನು ದುರಸ್ತಿಗೊಳಿಸಬೇಕು. ಮೆರವಣಿಗೆಗೆ ಅಡ್ಡಿಯಾಗುವ ಮರಗಳ ಟೊಂಗಿಗಳನ್ನು ಕತ್ತರಿಸಬೇಕು ಎಂಬ ಸಲಹೆಗಳು ವಿವಿಧ ಗಣೇಶ ಮಹಾಮಂಡಳಗಳ ಪದಾಧಿಕಾರಿಗಳಿಂದ ಕೇಳಿಬಂದವು.
18 ಅಡಿಗಳಿಗಿಂತ ಎತ್ತರದ ಗಣೇಶ ಮೂರ್ತಿಗಳ ಮೆರವಣಿಗೆಗೆ ಪರ್ಯಾಯ ಮಾರ್ಗ ಕಲ್ಪಿಸಬೇಕು. ಇದಕ್ಕಾಗಿ ಐಬಿ ಎದುರಿನ ರಸ್ತೆ ಯೋಗ್ಯವಾಗಿದೆ ಎಂಬ ಮಾಹಿತಿಯನ್ನು ಪೊಲೀಸ್ ಅಧಿಕಾರಿಗಳು ನೀಡಿದರು.
ಮೇಲ್ಸೇತುವೆ ಕಾಮಗಾರಿಗಾಗಿ ರಸ್ತೆ ಅಕ್ಕಪಕ್ಕ ಇಟ್ಟಿರುವ ಸಾಮಗ್ರಿಗಳನ್ನು ತೆರವುಗೊಳಿಸಬೇಕು. ಅಲ್ಲಲ್ಲಿ ತಡೆಗೋಡೆಗಳನ್ನು ನಿರ್ವಿುಸಿದ್ದು, ಅವುಗಳನ್ನು ಸಹ ತೆರವುಗೊಳಿಸುವಂತೆ ಮಹಾಮಂಡಳದ ಪ್ರಮುಖರು ಆಗ್ರಹಿಸಿದರು.
ಪರಿಸರ ಜಾಗೃತಿಯ ಉದ್ದೇಶವನ್ನಿಟ್ಟುಕೊಂಡು ರಚಿಸುವ ಗಣೇಶ ಮೂರ್ತಿಗಳ ಮಹಾಮಂಡಳಗಳಿಗೆ ಮಹಾನಗರ ಪಾಲಿಕೆ ವತಿಯಿಂದ ಬಹುಮಾನ ನೀಡಬೇಕು ಎಂದು ಪ್ರೇಮನಾಥ ಚಿಕ್ಕತುಂಬಳ ಸಲಹೆ ನೀಡಿದರು.
ಹುಬ್ಬಳ್ಳಿಯ ಚನ್ನಮ್ಮ ವೃತ್ತವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಿದೆ, ಇಡೀ ಮಹಾನಗರದಲ್ಲಿ ಗಣೇಶ ಮೂರ್ತಿಗಳ ಮೆರವಣಿಗೆ ಸರಳವಾಗಿ ನಡೆಯಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ಎಲ್ಲೆಡೆ ಅಗತ್ಯ ಸೌಲಭ್ಯ ಒದಗಿಸುವಂತೆ ಸಂಜೀವ ದುಮ್ಮಕ್ಕನಾಳ ಒತ್ತಾಯಿಸಿದರು.
ಮೇಯರ್ ದುರ್ಗಮ್ಮ ಬಿಜವಾಡ, ಸಭಾ ನಾಯಕ ಶಿವು ಮೆಣಸಿನಕಾಯಿ, ಮಾಜಿ ಮೇಯರ್ ರಾಮಪ್ಪ ಬಡಿಗೇರ, ಪಾಲಿಕೆ ಸದಸ್ಯ ನಜೀರ ಹೊನ್ಯಾಳ, ವಿವಿಧ ಶ್ರೀ ಗಣೇಶ ಮಹಾಮಂಡಳಗಳ ಪ್ರಮುಖರಾದ ಅಲ್ತಾಫ ನವಾಜ ಕಿತ್ತೂರ, ಶಾಂತರಾಜ ಪೋಳ, ಮಂಜುನಾಥ ಪೈ, ಪ್ರೊ. ವಿ. ಸಿ. ಗೌಡರ, ರಮೇಶ ಪೂಜಾರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net