ಹುಬ್ಬಳ್ಳಿ: music ಮನೆಯಲ್ಲಿ ಬಡತನ ಇದ್ದರೂ ಸಂಗೀತವನ್ನು ತಪಸ್ಸಿನಂತೆ ಕಲಿತು ತಮ್ಮೊಂದಿಗೆ ಶಿಷ್ಯವೃಂದವನ್ನು ಬೆಳೆಸಿದವರು ಪಂ. ಅರ್ಜುನಸಾ ನಾಕೋಡ ಅವರು, ಹಿಂದುಸ್ಥಾನಿ ಸಂಗೀತಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಕ್ಷಮತಾ ಸೇವಾ ಸಂಸ್ಥೆಯ ಸಂಚಾಲಕ ಗೋವಿಂದ ಜೋಶಿ ಹೇಳಿದರು.
ಗಾನಗಂಧರ್ವ ಪಂ. ಅರ್ಜುನಸಾ ನಾಕೋಡ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಕ್ಷಮತಾ ಸೇವಾ ಸಂಸ್ಥೆ ಹಾಗೂ ಸ್ವರ್ಣ ಗ್ರೂಪ್ ಆಫ್ ಕಂಪನಿ ಸಹಯೋಗದಲ್ಲಿ ಇಲ್ಲಿಯ ಸವಾಯಿ ಗಂಧರ್ವ ಹಾಲ್ನಲ್ಲಿ ಶನಿವಾರ ಏರ್ಪಡಿಸಿದ್ದ ಪಂ. ಅರ್ಜುನಸಾ ನಾಕೋಡ ಸಂಗೀತ ಮಹೋತ್ಸವ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿಂದುಸ್ಥಾನಿ ಸಂಗೀತವನ್ನು ಸಮಾಜಕ್ಕೆ ತಲುಪಿಸಿದ ಅವರ ಸ್ಮರಣೆ ಮೂಲಕ ಸಂಗೀತ ಪರಂಪರೆ ಬೆಳೆಸುವ ಕಾರ್ಯ ನಡೆಯುತ್ತಿದೆ. ಶಾಸ್ತ್ರೀಯ ಎಂದರೆ ಅದು ಭಾರತದ ಸಂಗೀತ. ಇದರಲ್ಲಿ ಸತ್ವ ಅಡಗಿದೆ. ಇದು ನಶಿಸಬಾರದು. ಮುಂಬರುವ ದಿನಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವ ಶಕ್ತಿ ಸಿಗಲಿ ಎಂದು ಆಶಿಸಿದರು.
ಟ್ರಸ್ಟ್ ಅಧ್ಯಕ್ಷ ರಂಗಾ ಬದ್ದಿ ಮಾತನಾಡಿ, ಕಳೆದ 10 ವರ್ಷಗಳಿಂದ ಸಂಗೀತ ಮಹೋತ್ಸವ ನಡೆಸುತ್ತ ಬರಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಒಳಗೊಂಡು ಅನೇಕ ಮಹನೀಯರು ಇದಕ್ಕೆ ಸಹಕಾರ ನೀಡುತ್ತ ಬಂದಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪದ್ಮಶ್ರೀ ಪಂ. ವೆಂಕಟೇಶಕುಮಾರ, ಪಂ. ಅರ್ಜುನಸಾ ನಾಕೋಡ ಅವರು ದೊಡ್ಡ ಸಂಗೀತಗಾರರು. ಕಷ್ಟದಲ್ಲಿ ಸಂಗೀತ ಕಲಿತು ಬೆಳೆಸಿದರು. ಅಂದಿನ ಕಾಲದಲ್ಲಿ ಅನೇಕರು ಪರಿಶ್ರಮ ಪಟ್ಟಿದ್ದಕ್ಕಾಗಿ ಇಂದಿನವರಿಗೆ ಅನುಕೂಲವಾಗಿದೆ. ಸಂಗೀತ ಎಂದರೆ ಅದು ವೇದ ಅಧ್ಯಯನ ಇದ್ದಂತೆ. ಮಕ್ಕಳಿಗೆ ಸಂಗೀತ ಕಲಿಸಬೇಕು ಎಂದರು.
ಪಂ. ವೆಂಕಟೇಶಕುಮಾರ ಅವರು ಸುಮಾರು ಎರಡು ತಾಸು ಸಂಗೀತದ ರಸದೌತಣ ಉಣಬಡಿಸಿದರು. ಆಲಾಪ ಆರಂಭದಿಂದಲೇ ಅವರ ಗಾಯನಕ್ಕೆ ಮನಸೋತ ಪ್ರೇಕ್ಷಕರು ಆಗಾಗ ಚಪ್ಪಾಳೆ ತಟ್ಟುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.