Jain ಮುನಿಗಳು ಹಾಗೂ ಸಾಧ್ವಿಜಿಯವರಿಗೆಪಾದಯಾತ್ರೆ ಸಂದರ್ಭದಲ್ಲಿ ಸೂಕ್ತ ರಕ್ಷಣೆ ಒದಗಿಸುವುದು ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೈನ ಸಮಾಜದವರು ಹುಬ್ಬಳ್ಳಿಯಲ್ಲಿ ಮೌನ ಪ್ರತಿಭಟನೆ ನಡೆಸಿದರು.
ಆಚಾರ್ಯ ಭಗವಂತ ಶ್ರೀ ಚಂದ್ರಭೂಷಣ ಸುರೀಶ್ವರ ಜೀ ಮಹಾರಾಜ್ ನೇತೃತ್ವದಲ್ಲಿ ಕಂಚಗಾರ ಗಲ್ಲಿಯ ಶ್ರೀ ಶಾಂತಿನಾಥ ಜೈನ ಬಸದಿಯಿಂದ ಆರಂಭಗೊಂಡ ಮೌನ ಪ್ರತಿಭಟನಾ ಮೆರವಣಿಗೆಯು ಶಂಕರಮಠ, ದುರ್ಗದ ಬೈಲ್, ಬ್ರಾಡವೇ, ಕೊಪ್ಪಿಕರ ರಸ್ತೆ ಮಾರ್ಗವಾಗಿ ಮಿನಿ ವಿಧಾನಸೌಧದಲ್ಲಿ ಸಮಾರೋಪಗೊಂಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಆಚಾರ್ಯ ಭಗವಂತ ಶ್ರೀ ಚಂದ್ರಭೂಷಣ ಸುರೀಶ್ವರ ಜೀ ಮಹಾರಾಜ್, ಅಹಿಂಸೆ, ಶಾಂತಿ ಮತ್ತು ಆಧ್ಯಾತ್ಮಿಕ ಶಿಸ್ತಿನ ಶಾಶ್ವತ ತತ್ವಗಳಿಂದ ಪ್ರೇರಿತರಾದ ಜೈನ ಮುನಿಗಳು ಯಾಂತ್ರಿಕ ಸಾರಿಗೆಯನ್ನು ತ್ಯಜಿಸಿ, ಕರುಣೆೆ, ಸಾಮರಸ್ಯ ಮತ್ತು ನೈತಿಕ ಪ್ರಜ್ಞೆಯ ಸಂದೇಶಗಳನ್ನು ಪ್ರಚಾರ ಮಾಡಲು ದೇಶಾದ್ಯಂತ ಬರಿಗಾಲಿನಲ್ಲಿ ಸಂಚಾರ ಮಾಡುತ್ತಾರೆ ಎಂದು ತಿಳಿಸಿದರು.
ಮುನಿಗಳ ಪಾದಯಾತ್ರೆಯು ಕೇವಲ ಒಂದು ಸ್ಥಳದಿಂದ ಮತ್ತೊಂದು ಸ್ಥಳದ ಪ್ರಯಾಣವಲ್ಲ, ಬದಲಿಗೆ ಅದು ಭಾರತದ ಸಾಂಸ್ಕೃತಿಕ ಪರಂಪರೆ. ಹೀಗಾಗಿ, ಜೈನ ಮುನಿಗಳು ಹಾಗೂ ಸಾಧ್ವಿಜಿ ಸಂಚರಿಸುವಾಗ ಅನೇಕ ಅಪಘಾತಗಳಾಗಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಹೆದ್ದಾರಿಯ ಆಯಕಟ್ಟಿನ ಸ್ಥಳಗಳಲ್ಲಿ ಪಾದಚಾರಿ/ಸನ್ಯಾಸಿಗಳ ದಾಟುವಿಕೆ ವಲಯ ಎಂದು ಸೂಚಿಸುವ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು. ಸಂಚಾರದ ಸಮಯದಲ್ಲಿ ಈ ಹಿಂದೆ ನಡೆದ ಜೈನ ಸನ್ಯಾಸಿಗಳ ಮತ್ತು ಸಾಧಿ್ವ ಅವರ ಸಾವಿನ ಬಗ್ಗೆ ಪಾರದರ್ಶಕ ತನಿಖೆ ಆಗಬೇಕು. ಜೈನ ಸನ್ಯಾಸಿಗಳು ಕಾಲ್ನಡಿಗೆ ಪ್ರಯಾಣವನ್ನು ಹೆಚ್ಚಾಗಿ ಕೈಗೊಳ್ಳುವ ಬೆಳಗಿನ ಮತ್ತು ಸಂಜೆಯ ಅವಧಿಯಲ್ಲಿ ವಿಶೇಷ ಹೆದ್ದಾರಿ ಗಸ್ತು ಮತ್ತು ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಕೈಗೊಳ್ಳಬೇಕು ಎಂದು ಮುನಿಶ್ರೀ ಆಗ್ರಹಿಸಿದರು.
ಸಮಾಜದ ಪ್ರಮುಖರಾದ ಮಹೇಂದ್ರ ಸಿಂಘಿ, ಜಯಂತಿಲಾಲ್ ಪರಮಾರ, ಶಾಂತಿನಾಥ ಹೋತಪೇಟ ಮಾತನಾಡಿದರು.
ಶಾಸಕ ಮಹೇಶ ಭರವಸೆ:ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಮಹೇಶ ಟೆಂಗಿನಕಾಯಿ ಅವರಿಗೆ ಹಾಗೂ ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯಗಳಿಗೆ ತಹಸೀಲ್ದಾರರ ಮುಖಾಂತರ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಜೈನ ಮುನಿಗಳು ಹಾಗೂ ಸಾಧ್ವಿಜಿಯವರಿಗೆ ಅಗತ್ಯ ಸುರಕ್ಷತಾ ಕ್ರಮ ಒದಗಿಸುವಂತೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.
ಜೈನ ಮರುಧರ ಸಂಘ, ದಿಗಂಬರ ಜೈನ ಸಮಾಜ, ಕಚ್ಚಿ ದಸಾ ಓಸ್ವಾಲ ಸಂಘದ ಮುಖಂಡರಾದ ಓಕಚಂದ್ ಜೈನ್, ಅಮೃತ ಜೈನ್, ಶರತ ಮೊಮಯ್ಯ, ರಾಜೇಂದ್ರ ಬೀಳಗಿ, ಇಂದ್ರಮಲ್ ಜೈನ್, ವಿಮಲ ತಾಳಿಕೋಟಿ ಹಾಗೂ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.