ಧಾರವಾಡ: ಅಳ್ನಾವರ ತಾಲೂಕಿನ ಕುಂಬಾರಕೊಪ್ಪ ಗ್ರಾಮದ ಮಾದಿಗ ಸಮುದಾಯದ ವ್ಯಕ್ತಿಯ ಕೊಲೆ ಹಾಗೂ ಸಮುದಾಯದ ಮೇಲಿನ ದೌರ್ಜನ್ಯ ಖಂಡಿಸಿ ಕರ್ನಾಟಕ ರಾಜ್ಯ ಆದಿಜಾಂಭವ ಮಾದರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.
ಮಧ್ಯಾಹ್ನ 2ರಿಂದ ಪ್ರತಿಭಟನೆ ಆರಂಭಿಸಿದ್ದ ಮಾದಿಗ ಸಮುದಾಯದವರು, ಮಧ್ಯಾಹ್ನ 3.30 ಆದರೂ ಜಿಲ್ಲಾಽಕಾರಿ ಅವರು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸದ ಕಾರಣ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕೊಠಡಿಗೆ ನುಗ್ಗಿದ ಪ್ರಸಂಗ ನಡೆಯಿತು. ಜಿಲ್ಲಾಽಕಾರಿ ಅವರು ಕೋರ್ಟ್ ಕಲಾಪದಲ್ಲಿ ಭಾಗಿಯಾಗಿದ್ದರಿಂದ ಸ್ಥಳಕ್ಕೆ ಬರುವುದು ವಿಳಂಬವಾಯಿತು. ಅದೇ ವೇಳೆ ಮಳೆಯೂ ಬಂತು. ಆ ಸಂದರ್ಭದಲ್ಲಿ ಪೊಲೀಸರನ್ನು ನೂಕಾಟ-ತಳ್ಳಾಟ ಮಾಡಿ ಪ್ರತಿಭಟನಾಕಾರರು, ಜಿಲ್ಲಾಽಕಾರಿ ಕೊಠಡಿಗೆ ನುಗ್ಗಿ ಘೋಷಣೆ ಕೂಗಿದರು.
ಕುಂಬಾರಕೊಪ್ಪ ಗ್ರಾಮದಲ್ಲಿ ಮಾದಿಗ ಸಮುದಾಯದ ನಿಂಗಪ್ಪ ಮÁದರ ಅವರನ್ನು ಭೀಕರವಾಗಿ ಕೊಲೆ ಮಾಡಿದ್ದು, ಪೊಲೀಸರು ಕೊಲೆ ಮಾಡಿದವರ ಪರ ನಿಂತು ರಕ್ಷಣೆ ಮಾಡುವ ಮೂಲಕ ಪ್ರಕರಣ ಮುಚ್ಚಿ ಹಾಕುವ ಕೆಲಸ ಮಾಡಿದ್ದಾರೆ. ನೊಂದ ಕುಟುಂಬಕ್ಕೆ ನ್ಯಾಯ ನೀಡದ ಭ್ರಷ್ಟ ಮತ್ತು ಕರ್ವವ್ಯ ಲೋಪ ಎಸಗಿದ ಪೊಲೀಸ್ ಅಽಕಾರಿಗಳನ್ನು ಅಮಾನತು ಮಾಡಬೇಕು. ಈ ಪ್ರಕರಣವನ್ನು ರಾಜ್ಯ ಸರ್ಕಾರವು ಎಸ್‌ಐಟಿಗೆ ವಹಿಸಿ ತನಿಖೆಗೆ ಆದೇಶಿಸಬೇಕು. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿ, ಅನುಕಂಪ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
ಕುಂಬಾರಕೊಪ್ಪ ಗ್ರಾಮದ ಮಾದಿಗ ಸಮದಾಯದ ಏಳು ಕುಟುಂಬಗಳು ಸರ್ಕಾರಿ ಜಮೀನಿನಲ್ಲಿ ಪೂರ್ವಿಕರ ಕಾಲದಿಂದ ಸಾಗುವಳಿ ಮಾಡುತ್ತ ಬಂದಿದ್ದು, ಈಗ ಅವರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಲಾಗುತ್ತಿದೆ. ಕೆಲ ಜನರು ಅವರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದು, ಹೀಗಾಗಿ ಮಾದಿಗ ಸಮುದಾಯ ಆತಂಕದಲ್ಲಿ ಬದುಕುವಂತಾಗಿದೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳ ರಾಜಕೀಯ ಒತ್ತಡದಿಂದ ಮಾದಿಗರ ಕುಟುಂಬಗಳ ಮೇಲೆ ದೂರು ದಾಖಲಿಸಿ, ಜೈಲಿಗೆ ಅಟ್ಟುವ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ದೂರಲಾಯಿತು.
ಧಾರವಾಡ ತಾಲೂಕಿನ ನರೇಂದ್ರ, ತಿಮ್ಮಾಪೂರ, ಮರೇವಾಡ ಗ್ರಾಮಗಳಲ್ಲಿ ಕೂಡ ಕೆಲ ಜಾಗದ ವಿಷಯಗಳ ಪ್ರಕರಣಗಳಲ್ಲಿ ಮಾದಿಗ ಸಮುದಾಯದ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದ್ದು, ಈ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು.
ಅಣ್ಣಿಗೇರಿಯ ತುಪ್ಪದಕುರಹಟ್ಟಿ, ದುರ್ಗದಕೇರಿ ಗ್ರಾಮ ಸೇರಿ ವಿವಿಧ ಗ್ರಾಮಗಳಲ್ಲಿ ಇರುವ ಮಾದಿಗ ಸಮದಾಯದ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಲೇ ಇದ್ದು, ಇಂತಹ ಘಟನೆಗಳಲ್ಲಿ ನ್ಯಾಯ ಒದಗಿಸುವ ಕೆಲಸ ಮಾಡುವಂತೆ ಮನವಿ ಮೂಲಕ ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.