ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗೇರಿ ಸ್ಲಂನಲ್ಲಿ ವಾಸಿಸುವ 92 ಕುಟುಂಬಗಳಿಗೆ ಕೊಳಚೆ ನಿಮೂಲನಾ ಮಂಡಳಿಯು ಕೆಲ ವರ್ಷಗಳ ಹಿಂದೆಯೇ ಹಕ್ಕು ಪತ್ರಗಳನ್ನು ವಿತರಿಸಿದೆ. ಆದರೂ, ಕೆಲ ಭೂ ಮಾಫಿಯಾಗಳು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಕೈ ಜೋಡಿಸಿ ಅಲ್ಲಿನ ಜನರನ್ನು ಒಕ್ಕಲೆಬಿಸುತ್ತಿದ್ದಾರೆ ಎಂದು ದೂರಿದರು.
ಬೆಂಗೇರಿ ಸ್ಲಂನ ನಿವಾಸಿಗಳ ಪರವಾಗಿ ಕೊಳಚೆ ನಿಮೂಲನಾ ಮಂಡಳಿಯ ಹಿರಿಯ ಅಧಿಕಾರಿಗಳು ಸೂಕ್ತ ನ್ಯಾಯವಾದಿಗಳನ್ನು ನೇಮಿಸಿ, ನ್ಯಾಯಾಲಯದಲ್ಲಿ ಹೋರಾಟ ನಡೆಸಬೇಕು. ಸರ್ಕಾರ ಸಹ ಬೆಂಗೇರಿ ಸ್ಲಂ ನಿವಾಸಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಬಡ ಜನರನ್ನು ಒಕ್ಕಲೆಬ್ಬಿಸಿ ವಾಣಿಜ್ಯ ಮಳಿಗೆಗಳನ್ನು ನಿರ್ವಿುಸುವ ಭೂಮಾಫಿಯಾಗಳ ಹುನ್ನಾರ ಬೆಂಗಳೂರಿನಂತಹ ಮಹಾನಗರದಲ್ಲಿ ನಡೆಯುತ್ತಿತ್ತು. ಇದೀಗ, ಹುಬ್ಬಳ್ಳಿಗೂ ಇದು ವಕ್ಕರಿಸಿರುವುದು ದುರದೃಷ್ಟಕರ ಎಂದರು.
ಜಿಲ್ಲಾಡಳಿತ ಮತ್ತು ಕೊಳಗೇರಿ ಅಭಿವೃದ್ಧಿ ಮಂಡಳಿ ಕೂಡಲೇ ಸ್ಥಳೀಯರ ರಕ್ಷಣೆಗೆ ಧಾವಿಸಬೇಕು. ಆ ಮೂಲಕ ಭೂಮಾಫಿಯಾಗಳ ದಬ್ಬಾಳಿಕೆ ತಡೆಯಬೇಕು.
ಬೆಂಗೇರಿ ಕೊಳಚೆ ಪ್ರದೇಶದ ರಕ್ಷಣೆ ಮಾಡದಿದ್ದರೆ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.