ಹುಬ್ಬಳ್ಳಿಯ ಕೆಸಿಸಿಐನಲ್ಲಿ ಭಾನುವಾರ ಏರ್ಪಡಿಸಿದ್ದ (poetry) ಸಮಾರಂಭದಲ್ಲಿ ಸಂತೋಷ ಅಂಗಡಿ ಹಾಗೂ ರಾಮಚಂದ್ರ ಎಸ್. ಕುಲಕರ್ಣಿ ಅವರಿಗೆ ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಾಜಿ ಸಿಎಂ ಜಗದೀಶ ಶೆಟ್ಟರ್, ಚಂದ್ರಶೇಖರ ವಸ್ತ್ರದ, ಸತೀಶ, ಎಂ.ಎ. ಸುಬ್ರಹ್ಮಣ್ಯ ಇತರರು ಇದ್ದರು.
ಹುಬ್ಬಳ್ಳಿ: ಮಾನವೀಯ ಮೌಲ್ಯಗಳು ಕುಸಿಯುತ್ತಿರುವ (poetry) ಈ ಸಂದರ್ಭದಲ್ಲಿ ಸಾಹಿತ್ಯ ಚಿಂತನೆಯ ಕೆಲಸಗಳು ದೊಡ್ಡ ಪ್ರಮಾಣದಲ್ಲಿ ನಡೆಯಬೇಕು, ಕಾವ್ಯಕ್ಕೆ ಬಹುದೊಡ್ಡ ಶಕ್ತಿ ಇದ್ದು ಅದು ನಾಡು ಕಟ್ಟುವ ಕೆಲಸಕ್ಕೆ ಪ್ರೇರಣೆಯಾಗಲಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.
ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಡಾ. ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ ಟ್ರಸ್ಟ್, ಜಗದೀಶ ಶೆಟ್ಟರ ದತ್ತಿ ಅಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯುವಕರು ಪತ್ರಿಕೆ ಹಾಗೂ ಸಾಹಿತ್ಯವನ್ನು ಹೆಚ್ಚು ಓದಬೇಕು. ಸಾಹಿತ್ಯಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರಬೇಕು. ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಇಂತಹ ಕಾರ್ಯವನ್ನು ಸಾಹಿತ್ಯ ಪ್ರಕಾಶನ ಸೇರಿ ಹಲವು ಸಂಸ್ಥೆಗಳು ಅವಿರತ ಮಾಡಿಕೊಂಡು ಬಂದಿದೆ ಎಂದರು.
ತೀರ್ಪುಗಾರರಾದ ಸಾಹಿತಿ ಚಂದ್ರಶೇಖರ ವಸ್ತ್ರದ ಮಾತನಾಡಿ, ಕವಿಗಳಿಗಿಂತ ಇಂದು ಕವನಗಳ ಸಂಖ್ಯೆ ಹೆಚ್ಚಾಗುತ್ತಿವೆ. ಅದರಲ್ಲಿ ಒಳ್ಳೆಯ ಕವನಗಳು ಬಹಳ ಕಡಿಮೆ ಇರುತ್ತವೆ. ಪ್ರಶಸ್ತಿಗೆ ಆಯ್ಕೆಯಾದ ಇಬ್ಬರು ಕವಿಗಳ ಬರವಣಿಗೆ ಉತ್ತಮವಾಗಿದೆ ಎಂದರು.
ಶಬ್ದದಲ್ಲಿ ಭಾವ ಪ್ರತಿಷ್ಠಾಪನೆ ಮಾಡಿದಾಗ ಅದು ಕವನವಾಗುತ್ತದೆ. ಇಲ್ಲದಿದ್ದರೆ ಅದು ಬರೀ ಶಬ್ದವಾಗುತ್ತದೆ. ಇಂತಹ ಕೆಲಸವನ್ನು ಕವಿ ಮಾಡುತ್ತಾನೆ. ಕವಿಯು ಶಬ್ದಗಳನ್ನು ಹಾಕುವಲ್ಲಿ ಜಿಪುಣ, ಜತೆಗೆ ನಿಪುಣನಾಗಿರಬೇಕು. ಆಗ ಆತ ನೈಪುಣ್ಯ ಸಾಧಿಸುತ್ತಾನೆ. ಪ್ರತಿಯೊಬ್ಬ ಕವಿಯ ಮೇಲೆ ಇತರರ ಪ್ರಭಾವ ಇದ್ದೇ ಇರುತ್ತದೆ. ಪ್ರಭಾವ ಇಲ್ಲದೇ ಕವನ ಹುಟ್ಟಲು ಸಾಧ್ಯವಿಲ್ಲ ಎಂದರು.
ಹಿರಿಯ ಕವಿ ಸತೀಶ ಕುಲಕರ್ಣಿ ಮಾತನಾಡಿ, ಬಹಳಷ್ಟು ಲೇಖಕರ ಬಗ್ಗೆ ಇಂದು ವಿಮರ್ಶೆಗಳು ನಡೆಯುತ್ತಿಲ್ಲ. ಪ್ರತಿಯೊಬ್ಬರೂ ಕಾವ್ಯದ ಪ್ರೀತಿ ಇಟ್ಟುಕೊಳ್ಳಬೇಕು. ನಾಡು ಕಟ್ಟಿದ್ದು ಹಾಡುಗಳು. ಹಾಡುಗಳು ಭಾವಕೋಶ ಜಾಗೃತ ಮಾಡುತ್ತವೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಟ್ರಸ್ಟ್ನ ಎಂ.ಎ. ಸುಬ್ರಹ್ಮಣ್ಯ, ಪ್ರಶಸ್ತಿಗೆ ಆಯ್ಕೆ ಮಾಡುವುದು ಸವಾಲಿನ ಕೆಲಸ. 2023 ಹಾಗೂ 2024ನೇ ಸಾಲಿನ ಎರಡು ವರ್ಷದ ಪ್ರಶಸ್ತಿ ಕೊಡಬೇಕಾಗಿತ್ತು. ಇದಕ್ಕಾಗಿ ತೀರ್ಪುಗಾರರಾಗಿ ಚಂದ್ರಶೇಖರ ವಸ್ತ್ರದ ಅವರು ಕೆಲಸ ನಿರ್ವಹಿಸಿದರು ಎಂದರು.
ಗದಗ ಜಿಲ್ಲೆ ಶಿರಹಟ್ಟಿಯ ಸಂತೋಷ ಅಂಗಡಿ ಅವರ ಭವದ ಅಗುಳಿ ಹಾಗೂ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಯಡ್ರಾವಿಯ ರಾಮಚಂದ್ರ ಎಸ್. ಕುಲಕಣಿರ್ ಅವರ ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತಾ ಕೃತಿಗೆ ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ್ಕಿ ಅವರ ಹಚ್ಚೇವು ಕನ್ನಡದ ದೀಪ ಸೇರಿ ವಿವಿಧ ಭಾವಗೀತೆಗಳನ್ನು ಗಾಯತ್ರಿ ದೇಶಪಾಂಡೆ ಹಾಗೂ ತಂಡದವರು ಪ್ರಸ್ತುತಪಡಿಸಿದರು. ಡಾ. ನಾಗಲಿಂಗ ಮುರಗಿ ತಬಲಾ, ವಿಜಯಕುಮಾರ ಅರ್ಕಸಾಲಿ ಹಾಮೋರ್ನಿಯಂ ಸಾಥ್ ನೀಡಿದರು.
ಕೆಸಿಸಿಐ ಗೌರವ ಕಾರ್ಯದರ್ಶಿ ಉದಯ ರೇವಣಕರ, ಡಾ. ಬಿ.ಎಸ್. ಮಾಳವಾಡ, ಡಾ. ರಾಮು ಮೂಲಗಿ, ಇತರರು ಇದ್ದರು. ಪ್ರೊ. ಜಿ.ಎಂ. ಹೆಗಡೆ ನಿರೂಪಿಸಿದರು. ಶಶಿ ಸಾಲಿ ವಂದಿಸಿದರು.