ಧಾರವಾಡ: ಶಾಲಾ ಸಂಸತ್ತಿಗೆ ಆಯ್ಕೆಯಾದ ಪ್ರತಿನಿಧಿಗಳು ತಮ್ಮ ಜೀವನದಲ್ಲಿ ಶಿಸ್ತು ಮತ್ತು ಸಮಯ ಪಾಲನೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಕಾರ್ಯಾಧ್ಯಕ್ಷ ಆರ್.ಯು. ಬೆಳ್ಳಕ್ಕಿ ಹೇಳಿದರು.
ನಗರದ ಟೌನ್ ಹಾಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಪ್ರೌಢ ಶಾಲೆಯ ಪ್ರಸಕ್ತ ವರ್ಷದ ಶಾಲಾ ಚಟುವಟಿಕೆಗಳ ಪ್ರಾರಂಭೋತ್ಸವ ಮತ್ತು 2026-27ನೇ ಸಾಲಿನ ಶಾಲಾ ಸಂಸತ್ತಿನ ಚುನಾಯಿತ ಪ್ರತಿನಿಧಿಗಳ ಪ್ರಮಾಣ ವಚನ ಸ್ವಿಕಾರ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿ ಪ್ರತಿನಿಧಿಗಳು ತಮಗೆ ವಹಿಸಿದ ಕೆಲಸಗಳನ್ನು ಅಚ್ಚುಕಟ್ಟಾಗಿ ನೆರವೆರಿಸಿ, ಶಾಲೆಯ ಘನತೆ ಎತ್ತಿ ಹಿಡಿಯಬೇಕು ಎಂದರು.
ಸಂಸ್ಥೆಯ ಅಧೀಕ್ಷಕ ಶಿವಲಿಂಗ ನೀಲಗುಂದ ಮಾತನಾಡಿ, ಈಗಿನ ವಿದ್ಯಾರ್ಥಿಗಳಿಗೆ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಲ್ಲಿ ಸೇವೆ ಸಲ್ಲಿಸಲು ಸಾಕಷ್ಟು ಅವಕಾಶಗಳಿವೆ. ಈಗಿನಂದಲೇ ಸಂಸತ್ತಿನ ಬಗ್ಗೆ ಅರಿವು ಹೊಂದಿ, ಜನರ ಸೇವೆಗೆ ಸನ್ನದ್ಧರಾಗಬೇಕು ಮತ್ತು ರಾಜ್ಯ ದೇಶದ ಅಭಿವೃದ್ಧಿಗೆ ಜೀವನ ಮುಡಿಪಾಗಿಡಬೇಕು ಎಂದರು.
ಮುಖ್ಯ ಶಿಕ್ಷಕಿ ಭುವನೇಶ್ವರಿ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಶಿಕ್ಷಕರ ಮೇಲೆ ಅವಲಂಬಿತರಾಗದೆ, ಅಭ್ಯಾಸದಲ್ಲಿ ತಮ್ಮ ಸ್ವಂತ ಪ್ರತಿಭೆ ತೋರಿಸಬೇಕು. ಜೀವನದಲ್ಲಿ ಒಳ್ಳೆಯ ಮಾರ್ಗ ಅನುಸರಿಸಿ ತಂದೆ-ತಾಯಿಗೆ ಕೀರ್ತಿ ತರಬೇಕು ಎಂದರು.
ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಡಿ.ಬಿ .ಹೊಂಬಳ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪದಕಗಳನ್ನು ನೀಡಿ, ಪ್ರಮಾಣವಚನ ಬೋಧಿಸಲಾಯಿತು. 8, 9ನೇ ತರಗತಿ ವಿದ್ಯಾರ್ಥಿನಿಯರು ಪ್ರಾರ್ಥನೆ ಮತ್ತು ಸ್ವಾಗತ ಗೀತೆ ಹಾಡಿದರು. ಎನ್.ಎಸ್. ಪಾಟೀಲ ನಿರೂಪಿಸಿದರು. ಮಂಜುಳಾ ಬಾವಿಹಾಳ ವಂದಿಸಿದರು.