ಪಿಎನ್ಜಿ ಪೈಪ್ಲೈನ್ ಇರುವ ಪ್ರದೇಶದಲ್ಲಿನ ಜನರು ಕಡ್ಡಾಯವಾಗಿ ಸಂಪರ್ಕ ಪಡೆಯಬೇಕು ಎಂಬ ಸೂಚನೆಯನ್ನು ಸರ್ಕಾರ ಈ ಹಿಂದೆ ನೀಡಿತ್ತು.
ಹುಬ್ಬಳ್ಳಿಯ ವಿದ್ಯಾನಗರದ ಶಿರೂರ ಪಾರ್ಕ್ನಲ್ಲಿರುವ ಆಯಿಲ್-ಅದಾನಿ ಗ್ಯಾಸ್ ಪ್ರೖೆವೇಟ್ ಲಿಮಿಟೆಡ್ (ಐಒಎಜಿ) ಕಚೇರಿಯಿಂದಲೂ ಪಿಎನ್ಜಿ ಸಂಪರ್ಕಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆದಿತ್ತು.
ಯುದ್ಧದ ಸಮಯದಲ್ಲಿ ಎಲ್ಪಿಜಿ ಸಿಲೆಂಡರ್ಗಳ ಕೊರತೆಯಿಂದಾಗಿ ಹೋಟೆಲ್, ಹಾಸ್ಟೆಲ್ಗಳಿಗೂ ಸಮಸ್ಯೆಯಾಗಿತ್ತು.
ಆದರೂ, ಬಹುತೇಕ ಮನೆಗಳು, ಹೋಟೆಲ್, ಹಾಸ್ಟೆಲ್ಗಳು ಪಿಎನ್ಜಿ ಸಂಪರ್ಕಕ್ಕೆ ಹಿಂದೇಟು ಹಾಕಿವೆ.
ಇದೀಗ, ಪರಿಸ್ಥಿತಿ ಸುಧಾರಿಸಿ ಎಲ್ಪಿಜಿ ಸಿಲೆಂಡರ್ ಗ್ಯಾಸ್ ಸುಲಭವಾಗಿ ಸಿಗುತ್ತಿದೆ. ಅಲ್ಲದೇ, ದರವೂ ಇಳಿಕೆಯಾಗಿದೆ.
ಎಲ್ಪಿಜಿ ಸಿಲೆಂಡರ್ ಸಮಸ್ಯೆ ಇದ್ದಾಗಲೇ ಪಿಎನ್ಜಿ ಸಂಪರ್ಕಕ್ಕೆ ಹಿಂದೇಟು ಹಾಕಿದ್ದ ಜನರು, ಈಗಂತೂ ಅದರತ್ತ ಯೋಚನೆಯನ್ನೂ ಮಾಡದಂತಾಗಿದ್ದಾರೆ.
ಮೂಲಗಳ ಪ್ರಕಾರ ಕಳೆದ 8 ವರ್ಷದಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಸುಮಾರು 35 ಸಾವಿರ ಮನೆಗಳಿಗೆ ಮಾತ್ರ ಪಿಎನ್ಜಿ ಸಂಪರ್ಕ ನೀಡಲಾಗಿದೆ.
ಯುದ್ಧದ ಸಂದರ್ಭದಲ್ಲಿ ಉಂಟಾದ ಗ್ಯಾಸ್ ಸಿಲೆಂಡರ್ ಸಮಸ್ಯೆ ಸಂದರ್ಭದಲ್ಲಿ ಪಿಎನ್ಜಿ ಸಂಪರ್ಕಕ್ಕಾಗಿ ಸುಮಾರು 500 ರಿಂದ 1 ಸಾವಿರ ಅರ್ಜಿಗಳು ಐಒಎಜಿ ಕಚೇರಿಗೆ ಬಂದಿದ್ದವು. ಆದರೆ, ಆ ಸಮಯದಲ್ಲಿ ಎರಡರಿಂದ ಮೂರುಸಾವಿರ ಅರ್ಜಿಗಳು ಪೈಪ್ ನ್ಯಾಚುರಲ್ ಗ್ಯಾಸ್ಗಾಗಿ ಬರಬಹುದೆಂದು ನಿರೀಕ್ಷಿಸಲಾಗಿತ್ತು.
ಈಗಾಗಲೇ ಪಿಎನ್ಜಿ ಪೈಪ್ಲೈನ್ ಇರುವ ಮನೆಗಳಲ್ಲಿ ನಿತ್ಯ 8-10 ಸಂಪರ್ಕಗಳನ್ನು ನೀಡಲಾಗುತ್ತಿದೆ. ಮೂಲಗಳ ಪ್ರಕಾರ ಯುದ್ಧದ ಅವಧಿಯಲ್ಲಿ ಶೇ. 15ರಷ್ಟು ಪಿಎನ್ಜಿ ಸಂಪರ್ಕಗಳು ಹೆಚ್ಚಾಗಬಹುದೆಂದು ನಿರೀಕ್ಷಿಸಲಾಗಿತ್ತು.
ಆದರೆ, ಶೇ. 5 ರಿಂದ 8ರಷ್ಟು ಮಾತ್ರ ಜನರು ಹೊಸ ಸಂಪರ್ಕ ಪಡೆಯಲು ಉತ್ಸಾಹ ತೋರಿದ್ದು, ಶೇ. 5ರಷ್ಟು ಹೊಸ ಸಂಪರ್ಕಗಳು ಮಾತ್ರ ಏರಿಕೆಯಾಗಿವೆ.
ಪಿಎನ್ಜಿ ಹೊಸ ಸಂಪರ್ಕಕ್ಕೆ ಆಗುವ ವಿಳಂಬದಿಂದಾಗಿ ಜನರು ಉತ್ಸಾಹ ತೋರುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಹೊಸ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಎರಡ್ಮೂರು ತಿಂಗಳು ನಂತರ ಸಂಪರ್ಕ ನೀಡಲಾಗುತ್ತದೆ. ಹೊಸ ಸಂಪರ್ಕಕ್ಕೆ 7,118 ರೂ. ಪಾವತಿಸಬೇಕಾಗುತ್ತದೆ. ಇದರಲ್ಲಿ 6 ಸಾವಿರ ರೂ. ಠೇವಣಿಗಾಗಿ ಮೀಸಲಿಡಲಾಗುತ್ತದೆ.
ಮನೆಯ ಸಮೀಪ ಪಿಎನ್ಜಿ ಪೈಪ್ಲೈನ್ ಇರಬೇಕು. 15 ಮೀಟರ್ವರೆಗಿನ ದೂರದಲ್ಲಿ ಪೈಪ್ಲೈನ್ ಇದ್ದರೆ ಉಚಿತ ಸಂಪರ್ಕ ನೀಡಲಾಗುತ್ತದೆ. ಒಂದು ವೇಳೆ ಪೈಪ್ಲೈನ್ ದೂರ ಇದ್ದರೆ, ಹೆಚ್ಚುವರಿ ಹಣ ಪಾವತಿಸುವುದು ಗ್ರಾಹಕರಿಗೆ ಅನಿವಾರ್ಯ.
ಪೈಪ್ಲೈನ್ ಇಲ್ಲದ ಬಡಾವಣೆಯವರು ಅರ್ಜಿ ಸಲ್ಲಿಸಿದರೆ, ಆ ಬಡಾವಣೆಯಲ್ಲಿ ಪೈಪ್ಲೈನ್ ಹಾಕದ ಹೊರತು ಸಂಪರ್ಕ ಅಸಾಧ್ಯ.
ಹೀಗಾಗಿ, ಈಗಾಗಲೇ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಸೌಲಭ್ಯ ಹೊಂದಿರುವವರು ಪಿಎನ್ಜಿ ಸಂಪರ್ಕಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ಹುಬ್ಬಳ್ಳಿಯ ಕೇಶ್ವಾಪುರ, ಶಿರೂರ ಪಾರ್ಕ್, ಡಾಲರ್ಸ್ ಕಾಲನಿ, ನವನಗರ, ರೇಣುಕಾ ನಗರ, ಮಂಜುನಾಥ ನಗರ, ಅರಿಹಂತ ನಗರ, ರಾಯಾಪುರ, ಧಾರವಾಡದ ಗಾಂಧಿನಗರಗಳಲ್ಲಿ ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ಪೈಪ್ ನ್ಯಾಚುರಲ್ ಗ್ಯಾಸ್ಗಾಗಿ ಪೈಪ್ಲೈನ್ ಅಳವಡಿಸಲಾಗಿದೆ.
ಆದರೂ, ಇಲ್ಲಿಯ ಜನರು ಸಂಪೂರ್ಣವಾಗಿ ಎಲ್ಪಿಜಿ ಗೃಹಬಳಕೆ ಅಡುಗೆ ಗ್ಯಾಸ್ ಸಿಲೆಂಡರ್ನಿಂದ ಪಿಎನ್ಜಿಗೆ ಬದಲಾಗಲು ಹಿಂದೇಟು ಹಾಕುತ್ತಿದ್ದಾರೆ.
ಕೆಲ ಮನೆಗಳಲ್ಲಿ ಪಿಎನ್ಜಿ ಸಂಪರ್ಕ ಇದ್ದರೂ, ಅದನ್ನು ಬಳಸದೇ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಬಳಕೆ ಮಾಡಲಾಗುತ್ತಿದೆ. ಇನ್ನೂ ಕೆಲವರು ಶುಲ್ಕ ಪಾವತಿಸದ ಕಾರಣ, ಪಿಎನ್ಜಿ ಸಂಪರ್ಕ ಕಡಿತಗೊಳಿಸಲಾಗಿದೆ.