ಪ್ರತಿ ನಾಗರಿಕರು ಗ್ಯಾರಂಟಿ ಯೋಜನೆಗಳ ಲಾಭಗಳನ್ನು ಪಡೆದುಕೊಳ್ಳುತ್ತಿದ್ದಾರೆ
ಸಿಮೆಂಟ್ ರಸ್ತೆ ಹಾಗೂ ಬೀದಿ ವಿದ್ಯುತ್ ದೀಪಗಳ ಲೋಕಾರ್ಪಣೆ
ಅವಳಿ ನಗರದಲ್ಲಿ ಇನ್ನಷ್ಟು ಸೌಲಭ್ಯ ಒದಗಿಸಲು ಸಿದ್ಧ
ಗುಡಿಹಾಳ ರಸ್ತೆಯ ವಿಶಾಲನಗರದಲ್ಲಿ ಬುಧವಾರ ಆಯೋಜಿಸಿದ್ದ ಸಿಮೆಂಟ್ ರಸ್ತೆ ಹಾಗೂ ಬೀದಿ ವಿದ್ಯುತ್ ದೀಪಗಳ ಲೋಕಾರ್ಪಣೆಗೊಳಿಸಿ, ಅವರು ಮಾತನಾಡಿದರು.
ರಾಜ್ಯದ ಯಾವುದೇ ಭಾಗ ಮೂಲ ಸೌಲಭ್ಯ ವಂಚಿತವಾಗಬಾರದು. ಆ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ. ಸರ್ಕಾರದ ಎಲ್ಲ ಇಲಾಖೆಗಳು ಜನಪರ ಕೆಲಸದಲ್ಲಿ ತೊಡಗಿಕೊಂಡಿವೆ ಎಂದರು.
ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನಾಡಿನ ಎಲ್ಲ ಜನರಿಗೆ ತಲುಪಿಸುವ ಮೂಲಕ ಇದೊಂದು ಜನಪರ ಸರ್ಕಾರ ಎಂಬ ಜನಮನ್ನಣೆಯನ್ನು ಈಗಾಗಲೇ ರಾಜ್ಯದ ಜನರು ನೀಡಿದ್ದಾರೆ. ಯಾವುದೇ ಪಕ್ಷ, ಜಾತಿ, ಧರ್ಮ ಎನಿಸದೇ ರಾಜ್ಯದ ಪ್ರತಿ ನಾಗರಿಕರು ಗ್ಯಾರಂಟಿ ಯೋಜನೆಗಳ ಲಾಭಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಹುಬ್ಬಳ್ಳಿ-ಧಾರವಾಡದಲ್ಲಿ ಮೂಲ ಸೌಲಭ್ಯಗಳ ಸಾಕಷ್ಟು ಕೊರತೆ ಇದೆ. ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಇದ್ದು, ಪಾಲಿಕೆ ಸೂಕ್ತ ಸಹಕಾರ ಕೊಟ್ಟರೆ ಅವಳಿ ನಗರದಲ್ಲಿ ಇನ್ನಷ್ಟು ಸೌಲಭ್ಯ ಒದಗಿಸಲು ಸಿದ್ಧ ಎಂದು ತಿಳಿಸಿದರು.
ಶಿಕ್ಷಣ, ಉದ್ಯಮ, ಉದ್ಯೋಗಾವಕಾಶ ಸೇರಿ ಹಲವಾರು ಸೌಲಭ್ಯಗಳನ್ನು ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿಗೆ ಒದಗಿಸಲು ಸರ್ಕಾರ ಸಿದ್ಧವಿದೆ.
ಬೆಂಗಳೂರು ಮಾದರಿಯಲ್ಲಿ ರಾಜ್ಯದ ಎಲ್ಲ ಮಹಾನಗರ, ನಗರ, ಪಟ್ಟಣಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ, ಕಳೆದ 30-40 ವರ್ಷಗಳಿಂದ ಈ ಭಾಗದಲ್ಲಿ ಮೂಲ ಸೌಲಭ್ಯಗಳ ಕೊರತೆ ಕಾಡುತ್ತಿತ್ತು.
ಇಲ್ಲಿನ ಶಾಸಕರು ಯಾವುದೇ ರೀತಿಯ ಅನುಕೂಲತೆಗಳನ್ನು ಒದಗಿಸಲು ಸಿದ್ಧರಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2023ರಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಭೇಟಿಯಾಗಿ ಈ ಭಾಗದಲ್ಲಿ ಸಿಮೆಂಟರ್ ರಸ್ತೆ ಹಾಗೂ ಬೀದಿ ದೀಪಗಳ ಸೌಕರ್ಯ ಒದಗಿಸಲು ಕೋರಲಾಗಿತ್ತು.
ಸಚಿವರು 5.78 ಕೋಟಿ ರೂ. ಅನುದಾನ ನೀಡುವ ಮೂಲಕ ವಿಶಾಲನಗರದಲ್ಲಿ ಅತ್ಯಾಧುನಿಕ ಸೌಲಭ್ಯ ಒದಗಿಸಿದರು ಎಂದು ತಿಳಿಸಿದರು.
ಪಾಲಿಕೆ ಸದಸ್ಯರಾದ ಚೇತನ ಹಿರೆಕೆರೂರ, ಮಂಗಳಾ ಗೌರಿ, ಸುವರ್ಣ ಕಲಕುಂಟಲ, ಕಾಂಗ್ರೆಸ್ ಮುಖಂಡರಾದ ದೀಪಾ ಗೌರಿ, ಅನಿಲ ಪಾಟೀಲ, ಅಲ್ತಾಫ ಹಳ್ಳೂರ, ದಾನಪ್ಪ ಕಬ್ಬೇರ ಹಾಗೂ ಇತರರಿದ್ದರು.