ಹುಬ್ಬಳ್ಳಿ:ದೆಹಲಿಯಲ್ಲಿ (Para Shooting) ಆಯೋಜಿಸಿದ್ದ 6ನೇ ರಾಷ್ಟ್ರೀಯ ಪ್ಯಾರಾ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ರಾಕೇಶ ನಿಡಗುಂದಿ ಹಾಗೂ ಜ್ಯೋತಿ ಸಣ್ಣಕ್ಕಿ ದಂಪತಿ ಚಿನ್ನದ ಪದಕ ಗೆದ್ದು ಗಮನ ಸೆಳೆದಿದ್ದಾರೆ. ಈ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕದವರು 4 ಚಿನ್ನ, 1 ಕಂಚಿನ ಪದಕ ಜಯಿಸಿದರು.
ನವೆಂಬರ್ 19ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಕೇಶ-ಜ್ಯೋತಿ ಜೋಡಿ 10 ಮೀಟರ್ ಏರ್ ರೈಫಲ್ ಸ್ಟ್ಯಾಡಿಂಗ್ ಎಸ್ಎಚ್-1ಮಿಶ್ರ ವಿಭಾಗದಲ್ಲಿ ಮಹಾರಾಷ್ಟ್ರದ ದಂಪತಿಗಳಾದ ಸ್ವರೂಪ ಉನಹಲ್ಕಾರ್ ಮತ್ತು ರೋಮಿ ಉನಹಲ್ಕಾರ್ ಅವರನ್ನು ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು.
ಇದಲ್ಲದೇ ರಾಕೇಶ ನಿಡಗುಂದಿ 10 ಮೀಟರ್ ಏರ್ ರೈಫಲ್ ಸ್ಟ್ಯಾಡಿಂಗ್ ಎಸ್ಎಚ್ 1ವೈಯಕ್ತಿಕ ವಿಭಾಗದಲ್ಲಿ ಚಿನ್ನ ದ ಪದಕ ಗಳಿಸಿದ್ದಾರೆ. ಜ್ಯೋತಿ ಸಣ್ಣಕ್ಕಿ 50ಮೀಟರ್ 3 ಪೋಜಿಷನ್ ರೈಫಲ್ ಎಸ್ಎಚ್1 ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಶ್ರೀಹರ್ಷ ದೇವರಡ್ಡಿ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಎಚ್ 2 ವಿಭಾಗದಲ್ಲಿ ಹಾಗೂ ಬ್ಲೈಂಡ್ ಶೂಟರ್ ಆದ ವೈಷ್ಣವಿ ರವಿಶಂಕರ ವಿ1-ಎಸ್ 10 ಮೀಟರ್ ರೈಫಲ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದರು.
ರಾಕೇಶ ಮತ್ತು ಜ್ಯೋತಿ ಸಣ್ಣಕ್ಕಿ ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಯಲ್ಲಿ ಮಾಜಿ ಸೈನಿಕ ರವಿಚಂದ್ರ ಬಾಳೆಹೊಸೂರ ಅವರಲ್ಲಿ ತರಬೇತಿ ಪಡೆದಿದ್ದಾರೆ. ರಾಕೇಶ ನಿಡಗುಂದಿ ಎರಡು ವರ್ಷದಿಂದ ದೆಹಲಿಯ ಸಾಯಿ ಎಕ್ಸಲೆಂಟ್ ಸೆಂಟರ್ನಲ್ಲಿ ವಿಶೇಷ ತರಬೇತಿ ಪಡೆಯುತ್ತಿದ್ದಾರೆ.