ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ಸಮಾವೇಶ ನ. 22ರಂದು Panchamasali Pratigya Kranti

Panchamasali Pratigya Kranti
Panchamasali Pratigya Kranti
Published on
ಕುಂದಗೋಳ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ಐತಿಹಾಸಿಕ ಹೋರಾಟಕ್ಕೆ ನಿರ್ಣಾಯಕ ತಿರುವು ನೀಡಲು ನ. 22ರಂದು ಕುಂದಗೋಳ ಪಟ್ಟಣದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ. 8ನೇ ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ರ‌್ಯಾಲಿ Panchamasali Pratigya Kranti ಸಮಾವೇಶದಲ್ಲಿ ಮೀಸಲಾತಿ ಹೋರಾಟದ ಮುಂದಿನ ಹಾದಿ ಕುರಿತು ಸ್ಪಷ್ಟ ನಿರ್ಣಯ ಕೈಗೊಳ್ಳಲಾಗುವುದು ಎಂದು ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1994ರಲ್ಲಿ ಕುಂದಗೋಳ ಕ್ಷೇತ್ರದಲ್ಲಿ ಮಾಜಿ ಸಚಿವ ಪಿ.ಸಿ. ಸಿದ್ದನಗೌಡ್ರ ನೇತೃತ್ವದಲ್ಲಿ ಸಮಾಜ ಸಂಘಟನೆಗಾಗಿ ಬೃಹತ ಸಭೆ ನಡೆದಿತ್ತು. ಅಂದಿನಿಂದ ಇಂದಿನವರೆಗೂ ತಾಲೂಕಿನ ಸಮಾಜ ಬಾಂಧವರು ಸಮಾಜದ ಕಾರ್ಯಕ್ರಮಕ್ಕೆ ಬೆಂಬಲಿಸುತ್ತಾ ಬಂದಿದ್ದಾರೆ. ತಾಲೂಕು ಲಿಂಗಾಯತ ಪಂಚಮಸಾಲಿ ಮಹಾಸಭಾ ಆಶ್ರಯದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮ ಅವರ 201 ವಿಜಯೋತ್ಸವ ಹಾಗೂ ಸಮಾಜಕ್ಕೆ 2ಎ ಮೀಸಲಾತಿ ಹೋರಾಟದ 8ನೇ ಹಂತದ ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ಕಾರ್ಯಕ್ರಮಕ್ಕೆ ರಾಜ್ಯದ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮೀಸಲಾತಿ ಹೋರಾಟ ನಿರ್ಣಯಕ್ಕೆ ಸಾಕ್ಷಿಯಾಗಬೇಕು ಎಂದರು.
2ಎ ಮೀಸಲಾತಿ ಹೋರಾಟಗಾರರ ಮೇಲೆ ಕಾಂಗ್ರೆಸ್ ಸರ್ಕಾರವು ಕಾನೂನುಬಾಹಿರವಾಗಿ ಮಾರಣಾಂತಿಕ ಹಲ್ಲೆ ಮಾಡಿಸಿದೆ. ಈ ಘಟನೆ ನಮ್ಮ ಸಮುದಾಯಕ್ಕೆ ದೊಡ್ಡ ನೋವು ತಂದಿದೆ. ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಸರ್ಕಾರಗಳ ಅವಧಿಯಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಹೋರಾಟ ಮಾಡಿದರೂ ಎಂದಿಗೂ ಹೋರಾಟಗಾರರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿರಲಿಲ್ಲ. ನಮ್ಮ ಹೋರಾಟ ದಮನಿಸುವ ಯತ್ನ ಮಾಡುತ್ತಿರುವುದು ಸರಿಯಲ್ಲ. ಮೀಸಲಾತಿ ಆದೇಶ ಪತ್ರ ಸಿಗುವವರೆಗೆ ಹೋರಾಟ ನಿರಂತರವಾಗಿರುತ್ತದೆ ಎಂದರು.
ಯಾವ ಸರ್ಕಾರ ನಮಗೆ ನ್ಯಾಯ ನೀಡಿದೆ, ಯಾರೂ ಅನ್ಯಾಯ ಮಾಡಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಸಮಾಜವು ವಿಮರ್ಶಿಸಿ, ರಾಜಕೀಯವಾಗಿ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ ಎಂದರು.
ಲಿಂಗಾಯತ ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ನಾಗರಾಜ ದೇಶಪಾಂಡೆ ಅವರು, ನ. 22ರಂದು ಬೆಳಗ್ಗೆ 10.30ಕ್ಕೆ ಶೆರೆವಾಡ ಟೋಲ್ ನಾಕಾದಿಂದ ಹರಭಟ್ಟ ಹೈಸ್ಕೂಲ್ ಮೈದಾನದವರೆಗೆ ಬೃಹತ್ ಬೈಕ್ ರ‌್ಯಾಲಿ ನಡೆಯಲಿದೆ. ರ‌್ಯಾಲಿ ಮೂಲಕ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಸಮಾವೇಶಕ್ಕೆ ಕರೆತರಲಾಗುವುದು. ಮಧ್ಯಾಹ್ನ 1 ಗಂಟೆಗೆ ನಡೆಯುವ ಮುಖ್ಯ ವೇದಿಕೆ ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶ್ರೀ ಶಿತಿಕಂಠೇಶ್ವರ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಅಭಿನವ ಬಸವಣ್ಣಜ್ಜನವರು ವಹಿಸುವರು.  ವೇದಿಕೆ ಕಾರ್ಯಕ್ರಮದ ನಂತರ ವೀರರಾಣಿ ಚನ್ನಮ್ಮಾಜಿ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗಳ ಭವ್ಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಲಿದೆ ಎಂದು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಸಿ.ಸಿ. ಪಾಟೀಲ, ಎಂ.ಆರ್. ಪಾಟೀಲ, ಮಹೇಶ ಟೆಂಗಿನಕಾಯಿ, ನಗರ ನೀರು ಸರಬುರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ, ಮಹಾಪೌರ ಜ್ಯೋತಿ ಪಾಟೀಲ ಸೇರಿದಂತೆ ಹಲವು ಮಾಜಿ ಸಚಿವರು, ಶಾಸಕರು ಮತ್ತು ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ಸೋಮರಾವ್ ದೇಸಾಯಿ, ಸೋಮನಗೌಡ ಪಾಟೀಲ, ಬಸವರಾಜ ನಾವಳ್ಳಿ, ಶೇಖಣ್ಣ ಬಾಳಿಕಾಯಿ, ವೇಂಕನಗೌಡ ಕಂಠೇಪ್ಪಗೌಡ್ರ, ದೇವಪ್ಪ ಇಚ್ಚಂಗಿ, ಯಲ್ಲಪ್ಪ ಶಿಗ್ಗಾಂವಿ, ವೈ.ಎನ್. ಪಾಟೀಲ, ವೈ.ಸಿ. ಕುಂದಗೋಳ, ಮಲ್ಲಿಕಾರ್ಜುನ ಕುನ್ನೂರ, ಅಪ್ಪಣ್ಣ ಹುಂಡೇಕಾರ, ಚನ್ನಪ್ಪ ಮಲ್ಲಾಪೂರ, ಬಸವರಾಜ ಪಲ್ಲೇದ ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net