ಜೈನ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹಿಸಿ ಪಾದಯಾತ್ರೆ ಡಿ. 4ರಿಂದ

ಸುವರ್ಣಸೌಧ ಎದುರು ಸಲ್ಲೇಖನ ವ್ರತದ ಎಚ್ಚರಿಕೆ ನೀಡಿದ ಆಚಾರ್ಯ ಶ್ರೀ ಗುಣಧರನಂದಿ
ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರಸಂತ, ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು.
ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರಸಂತ, ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು.
Published on: 

ಹುಬ್ಬಳ್ಳಿ : ಜೈನ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ. 4ರಂದು ಚಿಕ್ಕೋಡಿಯಿಂದ ಪಾದಯಾತ್ರೆ ಕೈಗೊಂಡು, ಬೆಳಗಾವಿ ಸುವರ್ಣಸೌಧದ ಎದುರು ಸಲ್ಲೇಖನ ವ್ರತ ಕೈಗೊಳ್ಳುವ ಮೂಲಕ ದೇಹತ್ಯಾಗ ಮಾಡಲಾಗುವುದು ಎಂದು ವರೂರು ನವಗ್ರಹ ತೀರ್ಥಕ್ಷೇತ್ರದ ರಾಷ್ಟ್ರಸಂತ, ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಹೇಳಿದರು.

ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಚಿವರಾದ ಸಂತೋಷ ಲಾಡ್, ಲಕ್ಷ್ಮಣ ಸವದಿ, ಸತೀಶ ಜಾರಕಿಹೊಳಿ ಹಾಗೂ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಮೊಬೈಲ್ ಫೋನ್ ಮೂಲಕ ಮಾತನಾಡಿದ್ದಾರೆ. ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತರುವ ಭರವಸೆ ನೀಡಿದ್ದಾರೆ. ಆದರೆ, ರಾಜ್ಯ ಸರ್ಕಾರದಿಂದ ಇದುವರೆಗೆ ಅಧಿಕೃತ ಹೇಳಿಕೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜೈನ ಸನ್ಯಾಸಿಗಳ ಸುರಕ್ಷತೆ, ಬಡ ಜೈನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯ, ಜೈನ ಸಾಧುಗಳಿಗೆ ರಾತ್ರಿ ವಾಸ್ತವ್ಯಕ್ಕೆ ಸ್ಥಳೀಯ ಶಾಲೆಗಳಲ್ಲಿ ವ್ಯವಸ್ಥೆ , ಜೈನರ ಕ್ಷೇತ್ರ ಸಮ್ಮೇದ ಶಿಖರ್ಜಿಗೆ ತೀರ್ಥಯಾತ್ರೆ ಕೈಗೊಳ್ಳಲು ಸಹಾಯಕ್ಕೆ ಕ್ರಮ ಕೈಗೊಳ್ಳಲು ಆಗ್ರಹಿಸುತ್ತ ಮೂರು ವರ್ಷಗಳಾಗಿವೆ.

ನ. 19ರಂದು ಜಮಖಂಡಿ ತಾಲೂಕಿನ ತೇರದಾಳದಲ್ಲಿ ಜೈನ ಸಮಾಜದವರ ಸಭೆ ನಡೆಸಲಾಗುವುದು. ನಂತರ ಕಾಗವಾಡ, ಅಥಣಿ ಹಾಗೂ ಇತರ ವಿಧಾನಸಭೆ ಕ್ಷೇತ್ರಗಳ ಶಾಸಕರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಜೈನ ಸಮಾಜದ ಸಾವಿರಾರು ಜನ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕದ ಮೂಲ ಜೈನ ಸಮಾಜದವರು ತೀರ ಬಡವರಿದ್ದಾರೆ. ಅನೇಕರಿಗೆ ಮಕ್ಕಳ ಶಿಕ್ಷಣ ಶುಲ್ಕ ಪಾವತಿಸಲು ಆಗದಂತಾಗಿದೆ.

ಹೀಗಾಗಿ, ಸರ್ಕಾರ ಜೈನ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ಸಮಾಜದ ಜನರಿಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.

ವಿಹಾರ ಕೈಗೊಳ್ಳುವ ಜೈನ ಸನ್ಯಾಸಿಗಳಿಗೆ ರಾತ್ರಿ ಸಮಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ವಸತಿಗೆ ವ್ಯವಸ್ಥೆ ಮಾಡುವಂತೆ ಕಳೆದ ಮೂರು ವರ್ಷಗಳಿಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲಾಗುತ್ತಿದೆ.

ಮೊಬೈಲ್ ಫೋನ್​ನಲ್ಲಿ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ. ಒಬ್ಬ ಸನ್ಯಾಸಿಯ ಕರೆಗೆ ಸ್ಪಂದಿಸದ ಸಚಿವ ಮಧು ಬಂಗಾರಪ್ಪ, ಜನಸಾಮಾನ್ಯರಿಗೆ ಯಾವ ರೀತಿ ಸಹಾಯ ಮಾಡಿಯಾರು ? ಎಂದು ಪ್ರಶ್ನಿಸಿದ ಶ್ರೀ ಗುಣಧರನಂದಿ ಮಹಾರಾಜರು, ಸಚಿವ ಮಧು ಬಂಗಾರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.