ಹುಬ್ಬಳ್ಳಿ :formula ದ್ವಿಭಾಷಾ ನೀತಿ ಜಾರಿಗೊಳಿಸಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ವಿರೋಧಿಸಿದೆ.
ಪ್ರಸ್ತುತ ಜಾರಿಯಲ್ಲಿರುವ ಕನ್ನಡ, ಇಂಗ್ಲಿಷ್, ಹಿಂದಿ ತ್ರಿಭಾಷಾ ಪದ್ದತಿಯು ಕರ್ನಾಟಕ, ಭಾರತ ಮತ್ತು ಜಗತ್ತನ್ನು ಒಂದುಗೂಡಿಸುವ ಭಾವನಾತ್ಮಕ ವಿಚಾರವಾಗಿದೆ.
ತ್ರಿಭಾಷಾ ಸೂತ್ರ ಎಂಬುವುದು ಯಾವುದಾದರೂ ಭಾಷೆಯ ಹೇರಿಕೆಗಾಗಿಯೋ ಅಥವಾ ಯಾವುದಾದರೂ ಹೋರಾಟದ ಫಲವಾಗಿ ಬಂದಿದ್ದಲ್ಲ.
ಶಿಕ್ಷಣ ತಜ್ಞರ ಮತ್ತು ಶೈಕ್ಷಣಿಕ ಪರಿಣತರ ಅನೇಕ ವರ್ಷಗಳ ಯೋಚನೆಯಿಂದಾಗಿ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವುದಕ್ಕಾಗಿ ಬಂದಂತಹ ನೀತಿಯಾಗಿದೆ ಎಂದು ಸಂಘದ ಅಧ್ಯಕ್ಷ ಸಂದೀಪ ಬೂದಿಹಾಳ ತಿಳಿಸಿದ್ದಾರೆ.
ಭಾರತದಲ್ಲಿ ತ್ರಿಭಾಷಾ ಸೂತ್ರವು 1968ರಲ್ಲಿ ಜಾರಿಗೆ ಬಂದಿದೆ. ಅಂದಿನಿಂದ ಸ್ಥಳೀಯ, ಆಂಗ್ಲ ಮತ್ತು ಹಿಂದಿ ಭಾಷೆಯನ್ನು ಕಲಿಸುವ ಅಭಿಪ್ರಾಯವನ್ನು ಕೋಠಾರಿ ಕಮಿಷನ್ ಶಿಫಾರಸಿನಂತೆ ಬಹು ಭಾಷಾ ಸೌಹಾರ್ದದ ಮೇರೆಗೆ ಮಾಡಲಾಗಿತ್ತು.
ಆದರೆ, ಜವಾಬ್ದಾರಿಯುತ ರಾಜ್ಯ ಸರ್ಕಾರವು ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ದ್ವಿಭಾಷಾ ನೀತಿ ಎಂಬ ಗೊಂದಲವನ್ನು ಸೃಷ್ಟಿಸಿ, ಕನಿಷ್ಠ ಸಾಮಾನ್ಯ ಜ್ಞಾನವೂ ಇಲ್ಲದ ರೀತಿಯಲ್ಲಿ ವರ್ತಿಸಿ ವಿದ್ಯಾರ್ಥಿ ಸಮೂಹ ಮತ್ತು ಶಿಕ್ಷಕರನ್ನು ದಾರಿ ತಪ್ಪಿಸುವ ಕೆಲಸ ಏಕೆ ಮಾಡುತ್ತಿದೆ? ಎಂದು ಪ್ರಶ್ನಿಸಿದ್ದಾರೆ.
ಈ ರೀತಿ ದ್ವಿಭಾಷಾ ಸೂತ್ರವನ್ನು ತರಲೇಬೇಕೆಂಬ ಯೋಚನೆ ಸರ್ಕಾರದ ಬಳಿ ಇದ್ದದ್ದೆ ಆದಲ್ಲಿ ಈ ಮೋದಲೆ ಘೋಷಣೆ ಮಾಡಿ, ಸಾರ್ವಜನಿಕ ಚರ್ಚೆಗೆ ಅನುವು ಮಾಡಿಕೊಡಬೇಕಾಗಿತ್ತು.
ಅದನ್ನು ಬಿಟ್ಟು ಯಾರದೋ ಒತ್ತಡಕ್ಕೆ ಮಣಿದು, ದ್ವಿಭಾಷಾ ನೀತಿಯ ಮುಖಾಂತರ ದೇಶೀಯ ಭಾಷೆಗಳನ್ನು ನಾಶಮಾಡಲು ಹೊರಟಿರುವ ರಾಜ್ಯ ಸರ್ಕಾರದ ಯೋಜನೆಯನ್ನು ಸಂಘ ತೀವ್ರವಾಗಿ ವಿರೋಧಿಸುತ್ತದೆ ಎಂದು ಸಂದೀಪ ಬೂದಿಹಾಳ ಹೇಳಿದ್ದಾರೆ.
ಕರ್ನಾಟಕದ ಶಾಲಾ ಶಿಕ್ಷಣ ಇಲಾಖೆಯ ಎಸ್ಎಸ್ಎಲ್ಸಿ ಪರೀಕ್ಷಾ ಪದ್ಧತಿಯಲ್ಲಿ ಕೈಗೊಂಡಿರುವ ಬದಲಾವಣೆಗಳು ಅತ್ಯಂತ ದುರದೃಷ್ಟಕರ ಮತ್ತು ವಿದ್ಯಾರ್ಥಿ ವಿರೋಧಿಯಾಗಿವೆ.
ದಶಕಗಳಿಂದಲೂ ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಯಲ್ಲಿದ್ದ ತ್ರಿಭಾಷಾ ಸೂತ್ರಕ್ಕೆ ಕೊಡಲಿ ಪೆಟ್ಟು ನೀಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಅಪ್ರಬುದ್ಧ ನಿರ್ಧಾರವು ರಾಜ್ಯದ ಶೈಕ್ಷಣಿಕ ಘನತೆಗೆ ಧಕ್ಕೆ ತಂದಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ತೃತೀಯ ಭಾಷೆಯ ಅಂಕಗಳನ್ನು ಸಂಪೂರ್ಣವಾಗಿ ಕೈಬಿಟ್ಟು ಕೇವಲ ಗ್ರೇಡ್ ಪದ್ಧತಿಗೆ ಸೀಮಿತಗೊಳಿಸಿರುವುದು ಮತ್ತು ಒಟ್ಟು ಅಂಕಗಳನ್ನು 625 ರಿಂದ 525ಕ್ಕೆ ಇಳಿಸಿರುವುದು ಶಿಕ್ಷಣ ಕ್ಷೇತ್ರದಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ ಎಂದು ಹೇಳಿದ್ದಾರೆ.
ದೇಶೀಯ ಭಾಷೆಗಳ ನಾಶ ಮಾಡುವ ದ್ವಿಭಾಷಾ ನೀತಿಯು ನಮ್ಮ ಮಾತೃಭಾಷೆಯಾದ ಕನ್ನಡಕ್ಕೂ ಹೊಡೆತ ಕೊಡುವುದನ್ನು ಸರ್ಕಾರ ಯೋಚಿಸಬೇಕಿದೆ. ಸರ್ಕಾರ ಈ ದ್ವಿಭಾಷಾ ನೀತಿಯನ್ನು ಜಾರಿ ಮಾಡಬಾರದು ಎಂದು ಸಂದೀಪ ಬೂದಿಹಾಳ ಆಗ್ರಹಿಸಿದ್ದಾರೆ.