ಹುಬ್ಬಳ್ಳಿ: ವಿಶ್ವ ಧ್ಯಾನ ದಿನಾಚರಣೆ ನಿಮಿತ್ತ ನೃಪತುಂಗ ಬೆಟ್ಟದ ರಸ್ತೆಯಲ್ಲಿರುವ ಹುಬ್ಬಳ್ಳಿ ಪಿರಾಮಿಡ್ ಧ್ಯಾನ ಮಂದಿರದಲ್ಲಿ ದಿನವಿಡೀ ಧ್ಯಾನ, ಸತ್ಸಂಗ ಕಾರ್ಯಕ್ರಮಗಳು ಭಾನುವಾರ ಜರುಗಿದವು.
ಪಿರಾಮಿಡ್ ಧ್ಯಾನ ಮಂದಿರದ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ಮಾತನಾಡಿ, ಯೋಗಾಸನವು ಬಹಿರಂಗ ಯೋಗವಾದರೆ, ಧ್ಯಾನವು ಅಂತರಂಗದ ಯೋಗ. ಧ್ಯಾನದಿಂದ ಮನುಷ್ಯನ ಆಲೋಚನಾ ಶಕ್ತಿ, ಭಾವನಾ ಶಕ್ತಿ ಮತ್ತು ಇಚ್ಛಾಶಕ್ತಿಗಳು ಒಂದೇ ದಿಕ್ಕಿನಲ್ಲಿ ಹರಿದು ಏಕಾಗ್ರತೆ ಮೂಡುವುದು. ಅದರಿಂದ ಮನಸಿಗೆ ನೆಮ್ಮದಿ, ಸಂತಸ ಮತ್ತು ಉಲ್ಲಾಸ ಉಂಟಾಗಲಿದೆ. ಬೆಳಗ್ಗೆ ಧ್ಯಾನ ಮಾಡುವ ರೂಢಿಯಿಟ್ಟುಕೊಂಡರೆ ದಿನವೆಲ್ಲ ಚಟುವಟಿಕೆಯಿಂದಿರಲು ಸಾಧ್ಯವಿದೆ ಎಂದರು.
ಗದಗಿನ ಸೀನಿಯರ್ ಪಿರಾಮಿಡ್ ಮಾಸ್ಟರ್ ವಿದ್ಯಾರಾಣಿ ಕೂಬಳ್ಳಿ ಮಾತನಾಡಿ, ಮಧುಮೇಹ, ಅಧಿಕ ರಕ್ತದೊತ್ತಡ, ಬೆನ್ನು ನೋವು, ಹಲ್ಲು ನೋವು ಮೊದಲಾದವುಗಳಿಂದ ಬಳಲುತ್ತಿದ್ದಾಗ ಧ್ಯಾನವು ಅವುಗಳ ಉಪಶಮನಕ್ಕೆ ನೆರವು ನೀಡಿತು ಎಂದು ತಮ್ಮ ಅನುಭವ ಹಂಚಿಕೊಂಡರು.
ಸೀನಿಯರ್ ಪಿರಾಮಿಡ್ ಮಾಸ್ಟರ್ ವಿಶಾಲಾಕ್ಷಿ ಆಕಳವಾಡಿ ಅಧ್ಯಕ್ಷತೆ ವಹಿಸಿದ್ದರು. ಗದಗಿನ ನೇತ್ರಾವತಿ ಕಟಗೇರಿ ಮಾತನಾಡಿದರು. ಧ್ಯಾನ ಮಂದಿರ ಉಪಾಧ್ಯಕ್ಷ ಚನ್ನು ಹೊಸಮನಿ, ಕಾರ್ಯದರ್ಶಿ ನೀಲಕಂಠ ಆಕಳವಾಡಿ, ಸುರೇಶ ಶೆಟ್ಟರ್, ಲಲಿತ್ ಶಾ, ಈಶ್ವರ ವಾಂಗಿ, ಜೀವನ ವಸ್ತ್ರದ ಉಪಸ್ಥಿತರಿದ್ದರು. ಅನಿತಾ ಇರಕಲ್ ನಿರೂಪಿಸಿದರು. ವಿಶ್ವಧ್ಯಾನ ದಿನಾಚರಣೆ ಅಂಗವಾಗಿ ಇಲ್ಲಿಯ ಧ್ಯಾನ ಕೇಂದ್ರದಲ್ಲಿ ಡಿ. 22ರಿಂದ 31ರವರೆಗೆ ನಿತ್ಯ ಬೆಳಗ್ಗೆ 5ರಿಂದ 8 ರವರೆಗೆ ಧ್ಯಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.