ಫ್ಲೈ ಓವರ್ ಗುಣಮಟ್ಟ ಪರೀಕ್ಷೆಗೆ ಸೂಚನೆ flyover

flyover ಹುಬ್ಬಳ್ಳಿಯ ಫ್ಲೈ ಓವರ್ ಕಾಮಗಾರಿ
flyover ಹುಬ್ಬಳ್ಳಿಯ ಫ್ಲೈ ಓವರ್ ಕಾಮಗಾರಿ
Published on

ಪ್ರಮುಖ ಮುಖ್ಯಾಂಶಗಳು

  • ಪಿಡಬ್ಲುಡಿ ಎನ್​ಚ್ ಮುಖ್ಯ ಇಂಜಿನಿಯರ್​ಗೆ ಸಚಿವ ಪ್ರಲ್ಹಾದ ಜೋಶಿ ನಿರ್ದೇಶನ
  • ಕಾಮಗಾರಿಯಲ್ಲಿ ಲೋಪದೋಷಗಳು ಇದ್ದಲ್ಲಿ ತಕ್ಷಣ ಸರಿಪಡಿಸಬೇಕು
  • ಗುಣಮಟ್ಟದ ಕುರಿತು ಸೂಕ್ತ ವರದಿಯನ್ನು ಪಡೆದುಕೊಳ್ಳಬೇಕು.
ಹುಬ್ಬಳ್ಳಿ :
ಕೇಂದ್ರ ಸರ್ಕಾರದ ಅನುದಾನದಡಿ ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿ ಶೇ. 70ರಷ್ಟು ಪೂರ್ಣಗೊಂಡಿದೆ. ಆದರೆ, ಯೋಜನೆಯ ಡಿಪಿಆರ್, ಅನುಮೋದನೆ, ಅನುಷ್ಠಾನ ಕಾರ್ಯಗಳನ್ನು ರಾಜ್ಯ ಲೋಕೋಪಯೋಗಿ ಇಲಾಖೆ ನಿರ್ವಹಿಸುತ್ತಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.
ಇಂಡಿಯನ್ ರೋಡ್ ಸೇಫ್ಟಿ ಸ್ಟ್ಯಾಂಡರ್ಡ್ಸ್ ಪ್ರಕಾರ ನಿರ್ಮಾಣ ಹಂತದ ಮತ್ತು ನಂತರದ ಸುರಕ್ಷತೆ ಮತ್ತು ಅತ್ಯುತ್ತಮ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳಲು ಖುದ್ದಾಗಿ ಕೆಲಸ ನಡೆಯುತ್ತಿರುವ ಸ್ಥಳದ ವೀಕ್ಷಣೆ ಕೈಗೊಂಡು ಸುರಕ್ಷತೆ ಮತ್ತು ಉತ್ತಮ ಗುಣಮಟ್ಟವನ್ನು ಖಾತರಿಪಡಿಸಿಕೊಳ್ಳುವಂತೆ ಪತ್ರದ ಮೂಲಕ ಸಚಿವ ಜೋಶಿ ಅವರು ಮುಖ್ಯ ಇಂಜಿನಿಯರ್ ಅವರಿಗೆ ಸೂಚನೆ ನೀಡಿದ್ದಾರೆ.
ಕಾಮಗಾರಿಯಲ್ಲಿ ಲೋಪದೋಷಗಳು ಇದ್ದಲ್ಲಿ ಅವುಗಳನ್ನು ತಕ್ಷಣ ಸರಿಪಡಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಇಂಡಿಯನ್ ಕಾಂಕ್ರೀಟ್ ಇನ್​ಸ್ಟಿಟ್ಯೂಟ್ ಮತ್ತು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನೀಯರ್ಸ್ ತಂಡ ಫ್ಲೈ ಓವರ್ ಕಾಮಗಾರಿ ವೀಕ್ಷಿಸಿ, ತಾಂತ್ರಿಕ ದೋಷ ಹಾಗೂ ಸುರಕ್ಷತೆಯ ಗಂಭೀರ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದನ್ನು ಸಚಿವ ಪ್ರಲ್ಹಾದ ಜೋಶಿ ಸ್ಮರಿಸಿದ್ದಾರೆ.
ಕೂಡಲೇ ತಾಂತ್ರಿಕ ಪರಿಣಿತರ ತಂಡವನ್ನು ರಚಿಸಿ ಸ್ಥಳದ ವೀಕ್ಷಣೆ ಕೈಗೊಂಡು ಸುರಕ್ಷತೆ ಮತ್ತು ಗುಣಮಟ್ಟದ ಕುರಿತು ಸೂಕ್ತ ವರದಿಯನ್ನು ಪಡೆದುಕೊಳ್ಳಬೇಕು.
ಅಸುರಕ್ಷಿತ ಅಂಶಗಳನ್ನು ಮತ್ತು ಕಾಮಗಾರಿ ಸ್ಥಳಗಳು ಕಂಡುಬಂದಲ್ಲಿ ಇಂಡಿಯನ್ ರೋಡ್ ಸೇಫ್ಟಿ ಸ್ಟ್ಯಾಂಡರ್ಡ್ಸ್ ಪ್ರಕಾರ ಕಾಮಗಾರಿಯ ಅನುಷ್ಠಾನವನ್ನು ಖಾತರಿಪಡಿಸಿಕೊಳ್ಳುವಂತೆ ನಿರ್ದೇಶಿಸಿದ್ದಾರೆ.
ಈ ಯೋಜನೆಗೆ ಕೇಂದ್ರ ಸರ್ಕಾರವು ವಿಶೇಷ ಪ್ರಕರಣವೆಂದು ಅನುದಾನ ನೀಡಿದ್ದು, ಇದರ ಸಂಪೂರ್ಣ ಸದುಪಯೋಗ ಹಾಗೂ ಸಮರ್ಪಕ ಜಾರಿಯ ಹೊಣೆ ಲೋಕೋಪಯೋಗಿ ಇಲಾಖೆಯದ್ದು ಎಂಬುದನ್ನು ಪುನಃ ನೆನಪಿಸುತ್ತಿರುವುದಾಗಿ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net