xpected ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ನಿಂತು ಹೋಗಿದ್ದು, ಭ್ರಷ್ಟಾಚಾರ, ತುಷ್ಠೀಕರಣ, ದುರಾಡಳಿತ ಹೆಚ್ಚಾಗಿದೆ. ಹೀಗಾಗಿ, ಮುಖ್ಯಮಂತ್ರಿ ಬದಲಾವಣೆಯಿಂದ ಹೆಚ್ಚಿನ ನಿರೀಕ್ಷೆ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಶುಕ್ರವಾರದಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನದ್ದು ಜನವಿರೋಧಿ ಸರ್ಕಾರ. ಅಷ್ಟೇ ಅಲ್ಲ, ಇದೊಂದು ಬೇಕಾಬಿಟ್ಟಿ ಸರ್ಕಾರ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಕಾಂಗ್ರೆಸ್ನ ಆತಂರಿಕ ವಿಚಾರ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಅಸ್ಥಿರತೆ ಉಂಟಾಗಿದೆ ಎಂದರು.
ಯಾವುದೇ ರೀತಿಯ ಸಕಾರಾತ್ಮಕ ಅಭಿಪ್ರಾಯಗಳು ಈ ಸರ್ಕಾರದ ಬಗ್ಗೆ ಕೇಳಿಬರುತ್ತಿಲ್ಲ. ಕೇವಲ ಕರ್ನಾಟಕ ಅಲ್ಲ, ಇಡೀ ಭಾರತದಲ್ಲಿಯೂ ಕಾಂಗ್ರೆಸ್ ಬಗ್ಗೆ ಸಕಾರಾತ್ಮಕ ಮಾತುಗಳು ಕೇಳಿಸುತ್ತಿಲ್ಲ.
ವಿದೇಶದಲ್ಲಿಯೂ ಈ ಸರ್ಕಾರದ ಬಗ್ಗೆ ನೆಗೆಟಿವ್ ವಿಚಾರಗಳು ಕೇಳಿಸುತ್ತಿವೆ. ಕೇವಲ ಮತಬ್ಯಾಂಕ್ ರಾಜಕಾರಣ ಮಾಡುವುದಷ್ಟೇ ಕಾಂಗ್ರೆಸ್ ಮುಖಂಡರಿಗೆ ತಿಳಿದಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್. ಯಡಿಯೂರಪ್ಪ ಅವರ ಬದಲಾವಣೆಗೂ, ಸಿದ್ದರಾಮಯ್ಯ ಅವರ ಬದಲಾವಣೆಗೂ ಹೋಲಿಕೆ ಸರಿಯಲ್ಲ.
ಯಡಿಯೂರಪ್ಪ ಅವರು ವಯಸ್ಸಿನ ಕಾರಣಕ್ಕೆ ಸಿಎಂ ಸ್ಥಾನದಿಂದ ಕೆಳಗೆ ಇಳಿಯಬೇಕಾಯಿತು. ಆದರೆ, ಸಿದ್ದರಾಮಯ್ಯ ಸಿಎಂ ಕುರ್ಚಿ ಬಿಡಲು ಎಷ್ಟು ಪ್ರಹಸನ ನಡೆಸಿದರೆಂಬುದು ಜನರಿಗೆ ಗೊತ್ತಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ತಮ್ಮದೇ ಪಕ್ಷದ ಹಿರಿಯ ನಾಯಕರೊಂದಿಗೆ ಯಾವ ರೀತಿ ನಡೆದುಕೊಳ್ಳಬೇಕೆಂಬ ಸಾಮಾನ್ಯ ಜ್ಞಾನವೂ ಇಲ್ಲ ಎಂದು ಟೀಕಿಸಿದರು.
ಮೇಕೇದಾಟು ಯೋಜನೆಗೆ ತಮಿಳುನಾಡು ಸಿಎಂ ವಿಜಯ ವಿರೋಧ ವ್ಯಕ್ತಪಡಿಸಿದ್ದರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಪ್ರಲ್ಹಾದ ಜೋಶಿ, ಕಾಂಗ್ರೆಸ್ ಸರ್ಕಾರ ಮೊದಲಿನಿಂದಲೂ ಈ ಯೋಜನೆಗೆ ಬೆಂಬಲ ನೀಡಿಲ್ಲ ಎಂದು ಆರೋಪಿಸಿದರು.
ಅಂತರ್ ರಾಜ್ಯ ಜಲವಿವಾದ ಬಗೆಹರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಈ ಹಿಂದಿನ ಪ್ರಧಾನಿ ದಿ. ಎ.ಬಿ. ವಾಜಪೇಯಿ ಹಾಗೂ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಅಂತರ್ ಜಲವಿವಾದ ಬಗೆಹರಿಸಲು ಸದಾ ಆಸಕ್ತಿ ತೋರಿದ್ದಾರೆ ಎಂದರು.
ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಇದ್ದಾಗ ಅಂತರ್ ರಾಜ್ಯ ಜಲವಿವಾದ ಬಗೆಹರಿಸಲು ಯಾವುದೇ ರೀತಿಯ ಚಿಂತನೆ ನಡೆಯಲಿಲ್ಲ. ಈಗಲೂ ರಾಜ್ಯ ಕಾಂಗ್ರೆಸ್ ಸರ್ಕಾರ ಈ ವಿವಾದದ ಬಗ್ಗೆ ಸ್ಪಷ್ಟ ನಿರ್ಧಾರ ತಳೆದಿಲ್ಲ ಎಂದು ಹೇಳಿದರು.