

ಹುಬ್ಬಳ್ಳಿ: ಮಳೆ ಮಾಪನಗಳು ಸರಿಯಾಗಿ ಕೆಲಸ ಮಾಡದೇ ಇರುವಾಗ ಬರಗಾಲದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಹೇಗೆ ವರದಿ ಸಲ್ಲಿಸುತ್ತೀರಿ ? ಎಂದು ಶಾಸಕ ಮಹೇಶ ಟೆಂಗಿನಕಾಯಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಬರಗಾಲದ ಕುರಿತ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಅವರು, ಮಳೆ ಮಾಪನಗಳ ನಿರ್ವಹಣೆಯಲ್ಲಿ ವಿಫಲವಾಗಿರುವ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಮಳೆ ಮಾಪನದ ಬಗ್ಗೆ 15 ಜಿಲ್ಲಾಧಿಕಾರಿಗಳಿಂದ ಮಾಹಿತಿ ಕೇಳಿದ್ದರು ಸಹ ಕೇವಲ 4 ಜಿಲ್ಲಿಗಳಿಂದ ಉತ್ತರ ಬಂದಿದೆ. ವಿಜಯನಗರ ಜಿಲ್ಲೆಯಲ್ಲಿ 150 ಮಳೆ ಮಾಪನ ಕೇಂದ್ರಗಳಿದ್ದು, ಅದರಲ್ಲಿ 59 ಮಳೆ ಮಾಪನಗಳು ಕಾರ್ಯನಿರ್ವಹಿಸುತ್ತಿಲ್ಲ. ಅಧಿಕಾರಿಗಳು ಮಾಹಿತಿ ಕೇಳಿದರೂ ಸರಿಯಾಗಿ ಉತ್ತರ ನೀಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಳೆ ಮಾಪನಗಳು ಸರಿಯಾಗಿ ಕೆಲಸ ನೀರ್ವಹಿಸದ ಕಾರಣ ಅನೇಕ ಪ್ರದೇಶಗಳು ಬರಗಾಲ ಘೋಷಣೆಯಿಂದ ದೂರವಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಿಜೆಪಿ ತಂಡಗಳು ರೈತರ ಹೊಲಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರೈತರ ಅಸಹಾಯಕತೆಯನ್ನು ಕಂಡಿದ್ದೇವೆ. ಮಳೆ, ಬೆಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಬರಗಾಲದ ಸಂಕಷ್ಟ ಎದುರಾಗಿದೆ. ರಾಜ್ಯ ಸರ್ಕಾರ ತಕ್ಷಣ ಪ್ರತಿ ಹೆಕ್ಟೇರ್ಗೆ 50 ಸಾವಿರ ರೂ. ಪರಿಹಾರ ಧನ ನೀಡಬೇಕು ಎಂದು ಒತ್ತಾಯಿಸಿದರು.
ಹುಬ್ಬಳ್ಳಿ ಸೆಂಟ್ರಲ್ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಬೈರಿದೇವರಕೊಪ್ಪ, ಉಣಕಲ್ಲ, ನಾಗಶೆಟ್ಟಿಕೊಪ್ಪ, ಗೋಪನಕೊಪ್ಪ, ಕೇಶ್ವಾಪುರ ಭಾಗದ ರೈತರು ಉದ್ದು, ಸೋಯಾಬೀನ್, ಮೆಣಸಿನಕಾಯಿ ಬೆಳೆಗಳು ಸಂಪೂರ್ಣ ನಾಶವಾಗಿವೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಸದನದ ಗಮನಕ್ಕೆ ತಂದರು.
ಬರಗಾಲ ನಿರ್ವಹಣೆ ಹಾಗೂ ಪರಿಹಾರದ ಕುರಿತು ಸರ್ಕಾರದ ಮುಂದಿನ ಯೋಜನೆ ಏನು ? ರೈತರಿಗೆ ತುರ್ತಾಗಿ ಪರಿಹಾರ ನೀಡಬೇಕು. ಜಾನುವಾರುಗಳಿಗೆ ಮೇವು ಒದಗಿಸಬೇಕು. ಸಮರ್ಪಕ ನೀರು ಪೂರೈಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.