ರೈತ ಹುತಾತ್ಮ ದಿನಾಚಾರಣೆ ಅಂಗವಾಗಿ ಬಸಪ್ಪ ಲಕ್ಕುಂಡಿ ಅವರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಶ್ರೀಗಳು, ‘ಮೂರು ಜಿಲ್ಲೆಗಳ 13 ತಾಲೂಕುಗಳ ಜನತೆ ಮಹದಾಯಿ ಹಾಗೂ ಕಳಸಾ- ಬಂಡೂರಿ ಯೋಜನೆ ಜಾರಿಗಾಗಿ ಈ ರೀತಿ ಗಮನ ಸೆಳೆಯಬೇಕು’ ಎಂದರು. ಈ ಭಾಗದ ರೈತ ಹೋರಾಟಗಾರರು ರಸ್ತೆ ಸಂಚಾರ ತಡೆ, ಪಟ್ಟಣ ಬಂದ್ ಮಾಡುವುದರಿಂದ ನಮಗೆ ನಾವೇ ತೊಂದರೆ ಮಾಡಿಕೊಂಡಂತೆ ಹೊರತು ಸರ್ಕಾರಕ್ಕಲ್ಲ. ಏನೇ ಹಾನಿಯಾದರೂ ನಮ್ಮ ಮೇಲೆ ಹಾಕಿ ತಮ್ಮ ಕುರ್ಚಿ ಗಟ್ಟಿಗೊಳಿಸಿಕೊಳ್ಳುತ್ತಾರೆ. ಇನ್ನು ಮುಂದೆಯಾದರೂ ರೈತರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು’ ಎಂದರು. ರೈತ ಮುಖಂಡ ಲೋಕನಾಥ ಹೆಬಸೂರ ಮಾತನಾಡಿ, ದಶಕಗಳಿಂದ ಮಹದಾಯಿ ಹಾಗೂ ಕಳಸಾ-ಬಂಡೂರಿ ನೀರಿಗಾಗಿ ರಸ್ತೆಗಿಳಿದು ಹೋರಾಟ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ. ರಾಜಕೀಯ ಮುಖಂಡರು ಒಬ್ಬರ ಮೇಲೊಬ್ಬರು ಗೂಬೆ ಕೂರಿಸುತ್ತಾ ಕಾಲಹರಣ ಮಾಡುತ್ತಿದ್ದಾರೆ. ಇದರಿಂದಾಗಿ ಯೋಜನೆ ಮತ್ತಷ್ಟು ನನೆಗುದಿಗೆ ಬಿದ್ದಿದೆ. ಈಗ ರೈತರು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ. ಇದು ನಮ್ಮ ಬದುಕಿನ ಹಕ್ಕಿನ ಹೋರಾಟವಾಗಿದ್ದು, ನಾವೆಲ್ಲರೂ ಮತ್ತೆ ಸಂಘಟಿತರಾಗಿ ಹೋರಾಟ ತೀವ್ರಗೊಳಿಸಬೇಕಾಗಿದೆ ಎಂದು ಕರೆ ನೀಡಿದರು. ಮಹೇಶ ಹಳ್ಳದ, ಮೈಲಾರಪ್ಪ ವೈದ್ಯ, ಎಂ.ಡಿ. ಕುಲಕರ್ಣಿ, ಅಣ್ಣಪ್ಪ ಭಾಗಿ, ಪ್ರೇಮಾ ನಾಯ್ಕರ, ಬಶೀರ ಅಹ್ಮದ ಹುನಗುಂದ, ಅಡಿವೆಪ್ಪ ಶಿರಸಂಗಿ, ದೇವೇಂದ್ರಪ್ಪ ಹಳ್ಳದ ಇತರರಿದ್ದರು.