ಸರ್ಕಾರ ಬೆಂಬಲ ಬೆಲೆ ಯೋಜನೆಯಲ್ಲಿ ಮೆಕ್ಕೆಜೋಳ ಖರೀದಿಗೆ ಆಗ್ರಹಿಸಿ ಕಳೆದ 3ದಿನಗಳಿಂದ ಪಟ್ಟಣದಲ್ಲಿ ರೈತರು ಧರಣಿ, ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸ್ಥಳಕ್ಕೆ ಶಾಸಕ ಎನ್.ಎಚ್. ಕೋನರಡ್ಡಿ ಹಾಗೂ ಜಿಲ್ಲಾಧಿಕಾರಿ ದಿವ್ಯ ಪ್ರಭು ಸೋಮವಾರ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು.
ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಸಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮ ವಹಿಸಲಾಗುತ್ತಿದೆ. ಕೆಲ ದಿನ ಕಾಲಾವಕಾಶ ನೀಡಿ ಉಪವಾಸ ಸತ್ಯಾಗ್ರಹ, ಧರಣಿ ಹಿಂಪಡೆಯುವ೦ತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ರೈತರು ಎಳನೀರು ಸೇವಿಸುವ ಮೂಲಕ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿ ಧರಣಿ ಹಿಂಪಡೆದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಗೋವಿನಜೋಳ ಖರೀದಿ ಬಗ್ಗೆ ಮಾತನಾಡಿದ್ದೇನೆ. ಕೇಂದ್ರ ಸರ್ಕಾರ ಅನುಮತಿ ಕೊಡಲಿ ಬಿಡಲಿ, ಗೋವಿನಜೋಳ ಖರೀದಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ತಾಂತ್ರಿಕ ಕಾರಣದಿಂದ ವಿಳಂಬವಾಗಿದೆ. ಸಚಿವರಾದ ಎಚ್.ಕೆ. ಪಾಟೀಲ ಹಾಗೂ ಚೆಲವರಾಯಸ್ವಾಮಿ ಅವರನ್ನು ದೆಹಲಿಗೆ ಕಳುಹಿಸಿ ಗೊಂದಲಗಳನ್ನು ಸರಿಪಡಿಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ. ರೈತ ಹೋರಾಟಗಾರರು ಸತ್ಯಾಗ್ರಹ ನಿಲ್ಲಿಸುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ರಾಜ್ಯ ಸರ್ಕಾರದ ಕಾರ್ಯದರ್ಶಿ ಶಾಲಿನಿ ರಜನೀಶ ಹಾಗೂ ಹಿರಿಯ ಅಽಕಾರಗಳು ಮೆಕ್ಕೆಜೋಳ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಈ ವಿಷಯದ ಗಂಭೀರತೆಯ ಅರಿವು ಇದ್ದು, ಸಕಾಲಕ್ಕೆ ಸರಿಪಡಿಸಲಾಗುವುದು ಎಂದರು. ಜಿಲ್ಲೆಯಲ್ಲಿ 95 ಸಾವಿರ ಹೆಕ್ಟೇರ್ ಬೆಳೆ ನಷ್ಟ್ಟವಾಗಿದೆ. ಈಗಾಗಲೇ ರೈತರ ಖಾತೆಗಳಿಗೆ 65 ಕೋಟಿ ರೂಪಾಯಿ ಜಮಾ ಮಾಡಲಾಗಿದೆ. ಇನ್ನಷ್ಟು ಅನುದಾನ ಬರಬೇಕಿದೆ. ಕೆಲ ರೈತರಿಗೆ ಹಣ ಜಮೆಯಾಗಿಲ್ಲ. ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸುವಂತೆ ಎಲ್ಲ ತಹಸೀಲ್ದಾರರಿಗೆ ಸೂಚಿಸಲಾಗಿದೆ ಎಂದರು.
ಶಾಸಕರು ಹಾಗೂ ಜಿಲ್ಲಾಽಕಾರಿ ಮನವಿಗೆ ಸ್ಪಂದಿಸಿದ ರೈತ ಸೇನಾ ರಾಜ್ಯಾಧ್ಯಕ್ಷ ಶಂಕರ ಅಂಬಲಿ ಮಾತನಾಡಿ, ನಿಮ್ಮ ಮೇಲೆ ನಂಬಿಕೆ ಇಟ್ಟು ಕಾಲಾವಕಾಶ ನೀಡುತ್ತೇವೆ. ಭರವಸೆ ಹುಸಿಯಾದರೆ ಮತ್ತೆ ಹೋರಾಟ ಮಾಡುತ್ತೇವೆ ಎಂದರು.