ಧಾರವಾಡ: ಕರ್ನಾಟಕ ನಾಟಕ ಅಕಾಡೆಮಿಯು 2026- 27ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿ ಮತ್ತು ದತ್ತಿನಿಧಿ ಪ್ರಶಸ್ತಿಗಳನ್ನು ಘೋಷಿಸಿದೆ. ಧಾರವಾಡದ ರಂಗನಿರ್ದೇಶಕಿ ವಿಶ್ವೇಶ್ವರಿ ಬಸವಲಿಂಗಯ್ಯ ಹಿರೇಮಠ ಅವರು
ವಾರ್ಷಿಕ
ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬೆಳಗಾವಿ ಜಿಲ್ಲೆ ಚನ್ನಮ್ಮನ ಕಿತ್ತೂರು ಮೂಲದ ವಿಶ್ವೇಶ್ವರಿ, ಬಾಲ್ಯದಲ್ಲೇ ಸಂಗೀತ, ಸಾಹಿತ್ಯ, ನೃತ್ಯ, ನಾಟಕ ಕಲೆಗಳಲ್ಲಿ ತೊಡಗಿಸಿಕೊಂಡವರು. 1984ರಿಂದ ಹವ್ಯಾಸಿ ರಂಗಭೂಮಿಗೆ ಪದಾರ್ಪಣೆ, ಕೆ.ವಿ. ಸುಬ್ಬಣ್ಣ ಮಾರ್ಗದರ್ಶನದಲ್ಲಿ ನಿನಾಸಂ ಸೇರ್ಪಡೆಯಾದರು. ರಾಜ್ಯಾದ್ಯಂತ ಮಕ್ಕಳ ಹಾಗೂ ಹಿರಿಯರ ನಾಟಕಗಳ ನಿರ್ದೇಶನ, ರಂಗ ತರಬೇತಿ ಶಿಬಿರಗಳನ್ನು ಆಯೋಜಿಸಿದ್ದಾರೆ. 1995ರಲ್ಲಿ ಪತಿ, ಜಾನಪದ ಕಲಾವಿದ ದಿ. ಬಸವಲಿಂಗಯ್ಯ ಹಿರೇಮಠ ಅವರೊಂದಿಗೆ ಜಾನಪದ ಸಂಶೋಧನ ಕೇಂದ್ರ ಹುಟ್ಟು ಹಾಕಿ ಜಾನಪದ ಕಲಾವಿದರ ಮತ್ತು ಕಲೆಗಳ ಪೋಷಣೆ ಕಾರ್ಯ ಮಾಡುತ್ತಿದ್ದಾರೆ.