Music program ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಭಾನುವಾರ ಪಂ. ವಿನಾಯಕ ತೊರವಿ ಅವರಿಗೆ ಗುರುಕುಮಾರ ಪಂಚಾಕ್ಷರಿ ಸಮ್ಮಾನ ಪುರಸ್ಕಾರ ನೀಡಲಾಯಿತು. ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ಶ್ರೀ ಚನ್ನವಿರ ಸ್ವಾಮೀಜಿ, ಶ್ರೀ ಶಿವಕುಮಾರ ಸ್ವಾಮೀಜಿ, ಡಾ. ಎಸ್.ಪಿ. ಬಳಿಗಾರ, ಗದಿಗಯ್ಯ ಹಿರೇಮಠ, ಪಂ. ರಾಜಗುರು ಕಲಿಕೇರಿ, ಇತರರು ಇದ್ದರು.
ಹುಬ್ಬಳ್ಳಿ: music program ಗುರುಕುಮಾರ ಪಂಚಾಕ್ಷರಿ ಸಮ್ಮಾನ ಇದು ರಾಷ್ಟ್ರೀಯ ಪುರಸ್ಕಾರ ಮಾತ್ರವಲ್ಲ ಪುಣ್ಯಕ್ಷೇತ್ರದಲ್ಲಿ ನಮ್ಮ ಗುರುಗಳು ನೀಡಿದ ಆಶೀರ್ವಾದವಾಗಿದೆ. ಈ ಗೌರವವನ್ನು ಸಂಗೀತ ಕಲಿಸಿದ ಗುರುರಾಯರು, ಪಂ. ಭೀಮಸೇನ ಜೋಶಿ ಅವರ ಪಾದಕ್ಕೆ ಅರ್ಪಿಸುವೆ ಎಂದು ಬೆಂಗಳೂರಿನ ಖ್ಯಾತ ಗಾಯಕ ಡಾ. ಪಂ. ವಿನಾಯಕ ತೊರವಿ ಹೇಳಿದರು.
ಗದಗನ ಶ್ರೀ ಗುರು ಪಂಚಾಕ್ಷರಿ ಸೇವಾ ಸಮಿತಿ, ನಗರದ ಮೂರುಸಾವಿರ ಮಠದ ಆಶ್ರಯದಲ್ಲಿ ಭಾನುವಾರ ಮೂರುಸಾವಿರ ಮಠದಲ್ಲಿ ಏರ್ಪಡಿಸಿದ್ದ ಗಾನಯೋಗಿ ಪಂಚಾಕ್ಷರಿ ಸಂಗೀತ ಪರಂಪರಾ ಉತ್ಸವ ಪಂಚಾಕ್ಷರಿ ಗದಗ ಘರಾನಾ ಸಮ್ಮೇಳನದಲ್ಲಿ ಗುರುಕುಮಾರ ಪಂಚಾಕ್ಷರಿ ಸಮ್ಮಾನ ರಾಷ್ಟ್ರೀಯ ಪುರಸ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
ನನ್ನ ಸಂಗೀತ ಸೇವೆ ಗುರುತಿಸಿ ಸಮಿತಿಯವರು ಮೂರುಸಾವಿರ ಮಠದಲ್ಲಿ ಸನ್ಮಾನಿಸುತ್ತಿರುವುದು ಪೂರ್ವಜನ್ಮದ ಪುಣ್ಯದ ಫಲವಾಗಿದೆ. ಹುಬ್ಬಳ್ಳಿ- ಧಾರವಾಡ, ಗದಗ ಈ ಭಾಗದಲ್ಲಿ ಸಂಗೀತ ಹಾಗೂ ಆಧ್ಯಾತ್ಮದ ಮಿಳಿತವಿದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಈ ಭಾಗದವರ ಧ್ವನಿಯನ್ನು ಕೇಳಿದರೆ ಇದರ ವಿಶೇಷತೆ, ಗಾಂಭೀರ್ಯತೆಯನ್ನು ಗುರುತಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸ್ತ್ರೀಯ ಸಂಗೀತ ಸನಾತನ ಕಲೆಯನ್ನು ಉಳಿಸಿ ಬೆಳೆಸುವ ಹೊಣೆ ಯುವ ಗಾಯಕರ ಮೇಲಿದೆ. ಯುವ ಕಲಾವಿದರು ಗುರುಗಳ ಸೇವೆ ಮಾಡುತ್ತ ಅವರ ಪ್ರೀತಿಗೆ ಪಾತ್ರರಾಗಬೇಕು. ಮಕ್ಕಳು ತಾಳ್ಮೆಯಿಂದ ಕಲಿಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸೇವಾ ಸಮಿತಿ ಅಧ್ಯಕ್ಷ ಡಾ. ರಾಜಗುರು ಕಲಿಕೇರಿ ಮಾತನಾಡಿ, ಸಮಿತಿಯಿಂದ ಸೇವಾ ಕಾರ್ಯಗಳು ದಶಕಗಳಿಂದ ನಡೆಯುತ್ತಿದೆ. ಅನೇಕ ಮಹನೀಯರು ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ ಎಂದರು.
ಪಂ. ವಿನಾಯಕ ತೊರವಿ ಅವರು ತಮ್ಮ ಗುರುಗಳಾದ ಗುರುರಾವ ದೇಶಪಾಂಡೆ, ಪಂ. ಭೀಮಸೇನ ಜೋಶಿ ಅವರಂತೆ ಹಾಡುತ್ತಾರೆ. ಅವರು ನಿಜ ಘರಾನಾ ಗಾಯಕರಾಗಿದ್ದಾರೆ ಎಂದು ಅಭಿನಂದಿಸಿದರು.
ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಲಿಂಗನಾಯಕನಹಳ್ಳಿಯ ಶ್ರೀ ಚನ್ನವಿರ ಸ್ವಾಮೀಜಿ, ಹಾವನೂರಿನ ಶ್ರೀ ಶಿವಕುಮಾರ ಸ್ವಾಮೀಜಿ ಉಪಸ್ಥಿತರಿದ್ದರು.
ಪ್ರಶಸ್ತಿ:
ಖ್ಯಾತ ನರರೋಗ ತಜ್ಞ ಡಾ. ಎಸ್.ಪಿ. ಬಳಿಗಾರ ಅವರಿಗೆ ನರರೋಗ ಸರ್ವಜ್ಞ ಹಾಗೂ ಧಾರ್ಮಿಕ, ಕಲೆ, ಸಂಸ್ಕೃತಿಗೆ ತಮ್ಮದೇ ಆದ ಕೊಡುಗೆ ನೀಡಿದ ಗದಿಗಯ್ಯ ಹಿರೇಮಠ ಅವರಿಗೆ ಕವಿ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪಂ. ಬಾಲಚಂದ್ರ ನಾಕೋಡ, ಪಂ. ಕುಮಾರ ಮರಡೂರ ಸೇರಿದಂತೆ ಅನೇಕ ಕಲಾವಿದರು ಸಂಗೀತ ಕಚೇರಿ ನಡೆಸಿದರು.
ಸಮಿತಿ ಉಪಾಧ್ಯಕ್ಷ ಶ್ರೀ ಮಹೇಶ್ವರ ಸ್ವಾಮೀಜಿ ಹೊಸಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪಂ. ಶಿವಲಿಂಗಯ್ಯಶಾಸ್ತ್ರಿ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಉದ್ಯಮಿಗಳಾದ ವಿನಾಯಕ ಹಬೀಬ, ಶಂಕರಸಾ ಬದ್ದಿ ಇತರರು ಪಾಲ್ಗೊಂಡಿದ್ದರು.