msme ಹುಬ್ಬಳ್ಳಿಯ ಎನ್ಕೆಎಸ್ಎಸ್ಐ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ವ್ಯಾಪಾರ ಅಭಿವೃದ್ಧಿ ಕಾರ್ಯಕ್ರಮವನ್ನು ಡಿಐಸಿ ಜೆಡಿ ಸತ್ಯನಾರಾಯಣ ಭಟ್ ಉದ್ಘಾಟಿಸಿದರು. ರಮೇಶ ಪಾಟೀಲ, ಬಸವರಾಜ ಜವಳಿ, ಶ್ರೀಪತಿ ಭಟ್, ಪ್ರವಿಣ ಮುಧೋಳ, ಇತರರು ಇದ್ದರು.
ಹುಬ್ಬಳ್ಳಿ: msme ದೇಶದಲ್ಲಿ ಕೃಷಿ ನಂತರ ಅತ್ಯಂತ ಹೆಚ್ಚು ಉದ್ಯೋಗ ನೀಡುವ ಕ್ಷೇತ್ರವೆಂದರೆ ಅದು ಸಣ್ಣ ಕೈಗಾರಿಕೆಗಳು, ಸಾರ್ವಜನಿಕ ರಂಗದ ಬೃಹತ್ ಉದ್ಯಮಗಳಿಗೆ ಪೂರಕವಾಗಿರುವ ಇವುಗಳನ್ನು ಹೆಚ್ಚು ಅಭಿವೃದ್ಧಿ ಪಡಿಸಲು ಸರ್ಕಾರಗಳು ಮುಂದೆ ಬರಬೇಕಿದೆ ಎಂದು ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆ ಸಂದ (ಎನ್ಕೆಎಸ್ಎಸ್ಐ) ಅಧ್ಯಕ್ಷ ರಮೇಶ ಪಾಟೀಲ ಹೇಳಿದರು.
ಇಲ್ಲಿಯ ಎನ್ಕೆಎಸ್ಎಸ್ಐ ಸಭಾಭವನದಲ್ಲಿ ಬುಧವಾರ ರ್ಯಾಂಪ್ ಯೋಜನೆಯಡಿ ಏರ್ಪಡಿಸಿದ್ದ ವ್ಯಾಪಾರ ಅಭಿವೃದ್ಧಿ ಕಾರ್ಯಕ್ರಮದಲ್ಲಿ (ವೆಂಡರ್ ಡೆವಲಪ್ಮೆಂಟ್ ಪ್ರೋಗ್ರಾಂ) ಅವರು ಮಾತನಾಡಿದರು.
ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯದ ಉದ್ಯಮಿಗಳೊಂದಿಗೆ ಸಂವಾದ ನಡೆಸುವುದರಿಂದ ರಾಷ್ಟ್ರದ ಅಭಿವೃದ್ಧಿಗೆ ಬೇಕಾದ ಸರಕುಗಳನ್ನು ಉತ್ಪಾದನೆ ಮಾಡಬಹುದು. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಬೃಹತ್ ಉದ್ಯಮಗಳನ್ನು ಕರೆ ತರುವುದು ಇಂದಿನ ಅಗತ್ಯ ಎಂದರು.
ಕರ್ನಾಟಕ ಸಣ್ಣ ಕೈಗಾರಿಕೆ ಸಂಘದ ಮಾಜಿ ಅಧ್ಯಕ್ಷ ಬಸವರಾಜ ಜವಳಿ ಮಾತನಾಡಿ, ಕಳೆದ ಐದು ವರ್ಷದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್ಎಂಇ) ವಲಯದಲ್ಲಿ ಬಹಳಷ್ಟು ಬದಲಾವಣೆಗಳು ಆಗಿವೆ. ಪ್ರೊಕ್ಯುರ್ಮೆಂಟ್ (ಖರೀದಿ ವಿಧಾನ ಅಥವಾ ನೀತಿ) ಪಾಲಿಸಿಯನ್ನು ಸರ್ಕಾರ ಜಾರಿಗೆ ತಂದಿದೆ. ಅದರಲ್ಲಿ ಸಾಕಷ್ಟು ಅವಕಾಶಗಳನ್ನು ನೀಡಲಾಗಿದೆ. ಆದರೆ, ಅದರ ಸದ್ಬಳಕೆ ಆಗಿಲ್ಲ. ಈ ದಿಸೆಯಲ್ಲಿ ಸಂವಾದ ಅಗತ್ಯ ಇತ್ತು ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸತ್ಯನಾರಾಯಣ ಭಟ್ ಮಾತನಾಡಿ, ಸಣ್ಣ ಕೈಗಾರಿಕೆಗಳು ಹುಟ್ಟಿನಿಂದಲೇ ಅನೇಕ ಸಮಸ್ಯೆಗಳನ್ನು ಎದುರಿಸುತ್ತವೆ. ಅವುಗಳ ನಿವಾರಣೆಗೆ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಳ್ಳುತ್ತ ಬಂದಿವೆ. ಭಾರತ ಸರ್ಕಾರ ಎಂಎಸ್ಎಂಇ ಗೆ ಒತ್ತು ನೀಡುತ್ತಿದೆ ಎಂದರು.
ತಂತ್ರಜ್ಞಾನ ಬಹಳಷ್ಟು ಮುಂದುವರಿದಿದ್ದು, ಜಾಗತಿಕವಾಗಿ ಎಲ್ಲ ಕೈಗಾರಿಕೆಗಳು ತೆರೆದುಕೊಳ್ಳುತ್ತಿವೆ. ಎಂಎಸ್ ಎಂಇ ಉತ್ಪಾದನೆಗಳನ್ನು ಎಲ್ಲ ಕಡೆ ಮಾರಾಟ ಮಾಡಬಹುದು. ಮಾರುಕಟ್ಟೆ ಅವಕಾಶಗಳು ಬಹಳಷ್ಟಿದ್ದು, ಅವುಗಳನ್ನು ಸಮರ್ಪಕ ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.
ಪ್ರವಿಣ ಮುಧೋಳ ಮಾತನಾಡಿ, ಹುಬ್ಬಳ್ಳಿಯು ಹಿಂದಿಗಿಂತಲೂ ಈಗ ಉದ್ಯಮ ವಲಯಕ್ಕೆ ಬಹಳ ಅನುಕೂಲಕರ ವಾತಾವರಣ ಹೊಂದಿದೆ. ಸಾರ್ವಜನಿಕ ರಂಗದ ಉದ್ಯಮಗಳಿಗೆ ಬೇಕಾದ ವಸ್ತುಗಳನ್ನು ಉತ್ಪಾದಿಸಿ ಕೊಡುವತ್ತ ಗಮನ ಹರಿಸಬೇಕು ಎಂದರು.