mrbc ಮಲಪ್ರಭಾ ಕಾಲುವೆ ನವೀಕರಣ ಕಾಮಗಾರಿಯಲ್ಲಿ ಅವ್ಯವಹಾರ

mrbc ಹುಬ್ಬಳ್ಳಿಯಲ್ಲಿ ಮಂಗಳವಾರ ಮಲಪ್ರಭಾ ಕಾಲುವೆ ಪುನಃ ನವೀಕರಣ ಕಾಮಗಾರಿ ಅವ್ಯವಹಾರ ಕುರಿತ ದಾಖಲೆ ಬಿಡುಗಡೆ ಮಾಡಿದ ರೈತ ಸೇನಾ ಅಧ್ಯಕ್ಷ ವೀರೇಶ ಸೊಬರದಮಠ. ಗುರು ರಾಯನಗೌಡ್ರ, ಶಿವಪ್ಪ ಹೊರಕೇರಿ, ಕರ್ಜಗಿಮಠ, ಅಶೋಕ ಸಾತಣ್ಣವರ ಇತರರು ಇದ್ದರು.
mrbc ಹುಬ್ಬಳ್ಳಿಯಲ್ಲಿ ಮಂಗಳವಾರ ಮಲಪ್ರಭಾ ಕಾಲುವೆ ಪುನಃ ನವೀಕರಣ ಕಾಮಗಾರಿ ಅವ್ಯವಹಾರ ಕುರಿತ ದಾಖಲೆ ಬಿಡುಗಡೆ ಮಾಡಿದ ರೈತ ಸೇನಾ ಅಧ್ಯಕ್ಷ ವೀರೇಶ ಸೊಬರದಮಠ. ಗುರು ರಾಯನಗೌಡ್ರ, ಶಿವಪ್ಪ ಹೊರಕೇರಿ, ಕರ್ಜಗಿಮಠ, ಅಶೋಕ ಸಾತಣ್ಣವರ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಲೋಕಾಯುಕ್ತ ತನಿಖೆಗೆ ರೈತ ಸೇನಾ ಆಗ್ರಹ
  • ಡಿಪಿಆರ್​ನಲ್ಲಿ ಇಲ್ಲದ ಕೆಲವು ಕಾಮಗಾರಿ
ಹುಬ್ಬಳ್ಳಿ: mrbc ಮಲಪ್ರಭಾ ಬಲ- ಎಡ ದಂಡೆ ಕಾಲುಗೆಗಳು ಸೋರಿಕೆಯಾಗದ ರೀತಿಯಲ್ಲಿ ಪುನಃ ನವೀಕರಣ ಮಾಡಲು ರೂಪಿಸಿದ ಯೋಜನೆಯ ಕಾಮಗಾರಿಯಲ್ಲಿ ಭಾರಿ ಅವ್ಯವಹಾರವಾಗಿದ್ದು, ಇದರ ಬಗ್ಗೆ ಲೋಕಾಯುಕ್ತ ಇಲಾಖೆ ಸಮಗ್ರ ತನಿಖೆ ನಡೆಸಬೇಕೆಂದು ರೈತ ಸೇನಾ ಕರ್ನಾಟಕ ಅಧ್ಯಕ್ಷ ವೀರೇಶ ಸೊಬರದಮಠ ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 114 ಕಿ.ಮೀ. ಉದ್ದದ ನಾಲೆಗುಂಟ ಸಂಚರಿಸಿ ಕಳಪೆ ಕಾಮಗಾರಿಯಾಗಿರುವುದು ಹಾಗೂ ಡಿಪಿಆರ್​ನಲ್ಲಿ ಇಲ್ಲದ ಕೆಲವು ಕಾಮಗಾರಿಗಳನ್ನು ಕೈಗೊಂಡಿರುವುದನ್ನು ರೈತ ಸೇನಾ ತಂಡ ಪತ್ತೆ ಹಚ್ಚಿದೆ. ಇದರ ಕುರಿತು ದಾಖಲೆಗಳನ್ನು ಸಂಗ್ರಹಿಸಿ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಕೂಡಲೇ ತನಿಖೆ ಕೈಗೊಳ್ಳಬೇಕು. ವಿಳಂಬ ಮಾಡಿದರೆ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಳಸಾ ಬಂಡೂರಿ ಯೋಜನೆಗಾಗಿ ರೈತರ ಹೋರಾಟ ತೀವ್ರವಾಗಿತ್ತು. ರೈತರು ಇದರ ಬಗ್ಗೆ ಗಮನ ಹರಿಸಲಿಲ್ಲ. ಇಷ್ಟು ದೊಡ್ಡ ಮೊತ್ತದ ಕಾಮಗಾರಿಯನ್ನು ಸರಿಯಾಗಿ ಮಾಡದೇ ಅನಗತ್ಯ ಕೆಲಸಗಳಿಗೆ ಹಣ ಬಳಕೆ ಮಾಡಲಾಗಿದೆ. ಪ್ರವಾಸಿ ಬಂಗ್ಲೆ, ನೌಕರರ ಕ್ವಾಟರ್ಸ್​ಗಳನ್ನು ನಿರ್ಮಾಣ ಮಾಡಿದ್ದಾರೆ. ಕಾಲುವೆ ಸೋರಿಕೆ ತಡೆಗಟ್ಟುವ ಕೆಲಸಗಳನ್ನು ಸಮರ್ಪಕವಾಗಿ ಮಾಡಲಿಲ್ಲ ಎಂದು ದೂರಿದರು.
ಈ ಬಗ್ಗೆ ದೂರು ಸ್ವೀಕರಿಸಿದ್ದ ಲೋಕಾಯುಕ್ತ ಇಲಾಖೆ 2025ರ ಜೂನ್​ನಲ್ಲಿ ತನಿಖಾಧಿಕಾರಿಯನ್ನು ಕಳುಹಿಸಿ ಮೂರು ದಿನದಲ್ಲಿ ತನಿಖೆ ಕೈಗೊಂಡು ವರದಿ ನೀಡಲು ಸೂಚಿಸಿತ್ತು. ಮೂರು ದಿನದಲ್ಲಿ ಸಮಗ್ರ ತನಿಖೆ ನಡೆಯಲಿಲ್ಲ. ಆದರೂ, ವರದಿ ನೀಡಲಾಗಿದೆ. ಹಾಗಾಗಿ ಪುನಃ ತನಿಖೆ ಕೈಗೊಳ್ಳಬೇಕು.ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು ಎಂಬ ಬೇಡಿಕೆ ಇಟ್ಟುಕೊಂಡು ಹೋರಾಟ ಆರಂಭಿಸಲಾಗಿದೆ ಎಂದರು.
ಮಲಪ್ರಭಾ ಕಾಲುವೆ ಕಾಮಗಾರಿಯಲ್ಲಿ ನಡೆದ ಅವ್ಯವಹಾರ ಬಯಲಿಗೆ ಎಳೆಯಲು ಮುಂದಾದ ತಮಗೆ ಅನೇಕ ಅಧಿಕಾರಿಗಳು ಆಮೀಷ ಒಡ್ಡಲು ಬಂದರು. ಆದರೆ, ತಾವು ರೈತರ ಪರ ಹೋರಾಟ ಮುಂದುವರಿಸಲು ಪ್ರಕರಣ ಕೈಗೆತ್ತಿಕೊಂಡಿರುವುದಾಗಿ ಸೊಬರದಮಠ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net