

ಹುಬ್ಬಳ್ಳಿ: ಯುನೈಟೆಡ್ ಇಂಟರ್ಕಾಂಟಿನೆಂಟಲ್ ಬಾಡಿ ಬಿಲ್ಡಿಂಗ್ ಫಿಟ್ನೆಸ್ ಫೆಡರೇಶನ್ (ಯುಐಬಿಎಫ್ಎಫ್) ಕರ್ನಾಟಕ ವತಿಯಿಂದ ಪ್ರಥಮ ಬಾರಿಗೆ ಉತ್ತರ ಕರ್ನಾಟಕದ ಪ್ರತಿಭೆಗಳಿಗಾಗಿ ಮಿಸ್ಟರ್ ಆ್ಯಂಡ್ ಮಿಸ್ ಕರ್ನಾಟಕ ಹಾಗೂ ಟ್ವಿನ್ ಸಿಟಿ ದೇಹದಾರ್ಢ್ಯ ಸ್ಪರ್ಧೆಯನ್ನು 2027ರ ಫೆಬ್ರವರಿ 6 ಹಾಗೂ 7ರಂದು ಆಯೋಜಿಸಲಾಗಿದೆ ಎಂದು ಫೆಡರೇಶನ್ ರಾಜ್ಯ ಅಧ್ಯಕ್ಷ ಡೆಲ್ಟಾ ವಿಶಿಷ್ಟ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ವಿಭಾಗಗಳಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆಗಳು ನಡೆಯಲಿದ್ದು, ಒಟ್ಟು 3 ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತಿದೆ. ಮೊದಲ ಬಾರಿ ಮಹಿಳೆಯರಿಗೆ ಕ್ಯಾಶ್ ಪೆಜ್ ಇರುವುದು ವಿಶೇಷ. ಅಲ್ಲದೇ ಆಕರ್ಷಕ ಟ್ರೋಫಿ, ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಗುವುದು ಎಂದರು.
ನಗರದ ನೆಹರು ಮೈದಾನದಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಆಸಕ್ತ ದೇಹದಾರ್ಢ್ಯ ಪಟುಗಳು ನೋಂದಣಿ ಮಾಡಿಕೊಳ್ಳಬೇಕು. ಹುಬ್ಬಳ್ಳಿ ಧಾರವಾಡ ಹಾಗೂ ಕನ್ನಡ ನಾಡಿನ ಕಲೆ, ಪರಂಪರೆಯನ್ನು ಸ್ಪರ್ಧೆಯಲ್ಲಿ ಬಿಂಬಿಸಲು ಪ್ರಯತ್ನಿಸಲಾಗಿದೆ. ವಿಜೇತರಿಗೆ ನೀಡುವ ಪದಕ, ಟ್ರೋಫಿ, ಪ್ರಮಾಣಪತ್ರದಲ್ಲಿ ಕನ್ನಡ ಭಾಷೆ, ಕಲೆಗೆ ಆದ್ಯತೆ ನೀಡಲಾಗಿದೆ ಎಂದರು.
ಬಾಡಿ ಬಿಲ್ಡಿಂಗ್ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಕೆರಳಿಸುವ ಉದ್ದೇಶದಿಂದ 5ರಿಂದ 13 ವರ್ಷದ ಮಕ್ಕಳಿಗಾಗಿ ವಿಶೇಷ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಪುರುಷ ಹಾಗೂ ಮಹಿಳೆಯರು, ಮಕ್ಕಳು ಸೇರಿ 20 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ರಾಜ್ಯದ ವಿವಿಧೆಡೆಯಿಂದ ಸುಮಾರು 600 ಪಟುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಫೆಡರೇಶನ್ ಉಪಾಧ್ಯಕ್ಷ ಶಿವಾಂಶ ಕುರ್ಡೇಕರ ಮಾತನಾಡಿ, ಚಾಂಪಿಯನ್ಶಿಪ್ನ ಟ್ರೋಫಿ ಬಿಡುಗಡೆ ಮಾಡಲಾಗುವುದು. ಇಲ್ಲಿ ಉತ್ತಮ ಪ್ರದರ್ಶನ ನೀಡುವ ಪಟುಗಳು ಮಿಸ್ಟರ್ ಇಂಡಿಯಾ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು ಎಂದರು.
ಫೆಡರೇಶನ್ ಸದಸ್ಯರಾದ ಲತಾ ನಟರಾಜ, ಭೂಮಿಕಾ ಗೌಡ ಮಾತನಾಡಿ, ಯುವತಿಯರು, ಮಹಿಳೆಯರು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ ದೇಹದ ಆರೋಗ್ಯ ಹಾಗೂ ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.