MP felicitation ಹುಬ್ಬಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕುರುಬ ಸಮಾಜ ಅಭಿವೃದ್ಧಿ ವೇದಿಕೆಯಿಂದ ಡಾ. ಮಾ. ನಾಗರಾಜ ಅವರನ್ನು ಅಭಿನಂದಿಸಲಾಯಿತು. ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಕೆ. ವಿರುಪಾಕ್ಷಪ್ಪ, ಅರವಿಂದ ಬೆಲ್ಲದ, ಎಂ.ಆರ್. ಪಾಟೀಲ, ಭೈರತಿ ಬಸವರಾಜ ಇತರರು ಇದ್ದರು.
ಹುಬ್ಬಳ್ಳಿ: MP felicitation ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಸೇರಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದ್ದು, ಜನಗಣತಿ ಕಾರ್ಯ ಮುಗಿಯುತ್ತಿದ್ದಂತೆ ಇದಕ್ಕಿರುವ ಅಡೆತಡೆ ನಿವಾರಣೆಗೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭರವಸೆ ನೀಡಿದರು.
ಕುರುಬ ಸಮಾಜ ಅಭಿವೃದ್ಧಿ ವೇದಿಕೆ ವತಿಯಿಂದ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯಸಭೆ ಸದಸ್ಯ ಪ್ರೊ. ಮಾ. ನಾಗರಾಜ ಅವರಿಗೆ ಅಭಿನಂದನೆ ಸಮಾರಂಭದಲ್ಲಿ ಅತಿಥಿಗಳಾಗಿ ಅವರು ಮಾತನಾಡಿದರು.
ಸುಪ್ರೀಂ ಕೋರ್ಟ್ ನಿಬಂಧನೆ ಹಿನ್ನೆಲೆಯಲ್ಲಿ ಈ ವಿಚಾರವನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡಬೇಕಾಗಿದೆ. ಈ ವಿಷಯದಲ್ಲಿ ಗಣತಿ ಕಾರ್ಯ ಮುಗಿದ ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿ ಗಂಭೀರ ಪ್ರಯತ್ನ ಮಾಡಲಾಗುವುದು ಎಂದರು.
ಸಚಿವರ ಮೇಲೆ ಜವಾಬ್ದಾರಿ
ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಕೇಂದ್ರ ಸಚಿವ ಜೋಶಿ ಅವರು ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಲು ಎಲ್ಲ ಸಹಕಾರ ನೀಡುತ್ತ ಬಂದಿದ್ದಾರೆ. ಇದೀಗ ಕೇಂದ್ರದ ಅಂಗಳದಲ್ಲಿರುವ ಈ ಕಡತಕ್ಕೆ ಅಂತಿಮ ಮುದ್ರೆ ಹಾಕಿಸುವ ಮಹತ್ವದ ಜವಾಬ್ದಾರಿಯೂ ಅವರ ಮೇಲೆ ಇದೆ ಎಂದರು.
ಮಾಜಿ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಮಾತನಾಡಿ, ದಶಕಗಳಿಂದ ರಾಜ್ಯಸಭೆಯಲ್ಲಿ ಕುರುಬ ಸಮಾಜಕ್ಕೆ ಪ್ರತಿನಿಧಿತ್ವ ಇರಲಿಲ್ಲ. ಅದು ಈಗ ಮಾ. ನಾಗರಾಜ ಅವರ ಮೂಲಕ ಭತಿರ್ಯಾಗಿದೆ. ಸಮಾಜವನ್ನು ಎಸ್ಟಿಗೆ ಸೇರಿಸುವುದು ಮಹತ್ವದ ಕೆಲಸವಾಗಲಿದೆ. ಸಮಾಜ ನಿಮ್ಮ ಜತೆ ನಿಲ್ಲಲಿದ್ದು, ಈ ಕಾರ್ಯ ಮಾಡಿ ಎಂದು ಸಚಿವ ಜೋಶಿ ಅವರಿಗೆ ಮನವಿ ಮಾಡಿದರು.
ಮಾಜಿ ಸಚಿವ ಭೈರತಿ ಬಸವರಾಜ ಮಾತನಾಡಿ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪ್ರತಿ ಜಿಲ್ಲೆಗೆ ಒಬ್ಬರಂತೆ ಕುರುಬ ಸಮಾಜಕ್ಕೆ ಅವಕಾಶ ನೀಡಬೇಕು. 2028ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು.
ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ಸಮಾಜಕ್ಕೆ ಪಕ್ಷ ಬಹಳಷ್ಟು ನೀಡಿದೆ. ಮುಂದಿನ ದಿನಗಳಲ್ಲಿಯೂ ಬಿಜೆಪಿಗೆ ಬೆಂಬಲವಾಗಿ ನಿಲ್ಲಬೇಕು ಎಂದರು. ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ಶಾಸಕ ಎಂ.ಆರ್. ಪಾಟೀಲ, ಶರಣು ತಳ್ಳಿಕೇರಿ ಇತರರು ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ರಾಜ್ಯಸಭೆ ಸದಸ್ಯ ಡಾ. ಮಾ. ನಾಗರಾಜ ಮಾತನಾಡಿ, ಪಕ್ಷ ತಮ್ಮ ಸೇವೆ ಗುರುತಿಸಿ ಜವಾಬ್ದಾರಿ ನೀಡಿದೆ. ಇದನ್ನು ಸಮರ್ಥವಾಗಿ ನಿಭಾಯಿಸುವೆ. ಅಭಿನಂದಿಸಿದ ಸಮಾಜ ಹಾಗೂ ಪಕ್ಷಕ್ಕೆ ಕೃತಜ್ಞತೆ ಸಲ್ಲಿಸುವೆ ಎಂದರು.