ಹಣ ನೀಡಿದ ಶಾಸಕರಿಗಷ್ಟೇ ಮಂತ್ರಿಗಿರಿ? paid

paid ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ.
paid ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ.
Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯ ಸಚೇತಕ ಎನ್. ರವಿಕುಮಾರ ಪ್ರಶ್ನೆ
  • ನಾಗೇಂದ್ರ ಅವರಿಗೆ ಸರ್ಕಾರವಾಗಲಿ ಅಥವಾ ನ್ಯಾಯಾಲಯವಾಗಲಿ ಕ್ಲೀನ್ ಚಿಟ್ ನೀಡಿಲ್ಲ
  • ಕಾಂಗ್ರೆಸ್​ನವರು ಸಭಾಪತಿ ಸ್ಥಾನವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಹಾಗೂ ಕಾಂಗ್ರೆಸ್ ಮುಖಂಡ ನಂಜಯ್ಯನಮಠ ಮಧ್ಯೆ ನಡೆದ ಮೊಬೈಲ್ ಸಂಭಾಷಣೆ ವೇಳೆ ಈ ಸಂಶಯ ವ್ಯಕ್ತವಾಗಿದೆ ಎಂದರು.
ಈ ಆಡಿಯೋ ಬಗ್ಗೆ ಎಐಸಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇದೊಂದು ಹುಚ್ಚರ ಸಚಿವ ಸಂಪುಟವೆಂದು ಆರ್.ಬಿ. ತಿಮ್ಮಾಪುರ ಆಡಿಯೋದಲ್ಲಿ ಹೇಳಿದ್ದಾರೆ.
ಮಾಜಿ ಸಚಿವ ನಾಗೇಂದ್ರ ಅವರಿಗೆ ಸಂಪುಟದಲ್ಲಿ ಮತ್ತೆ ಸಚಿವ ಸ್ಥಾನ ನೀಡಿರುವುದು ದುರ್ದೈವದ ಸಂಗತಿ ಎಂಬ ಹೇಳಿಕೆಯನ್ನೂ ತಿಮ್ಮಾಪೂರ ನೀಡಿದ್ದಾರೆ ಎಂದು ಹೇಳಿದರು.
ವಿಸ್ತರಣೆಯಾಗಿರುವ ಸಚಿವ ಸಂಪುಟದಲ್ಲಿ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಅವರಿಗೆ ಮತ್ತೆ ಮಂತ್ರಿ ಸ್ಥಾನ ಕೊಟ್ಟಿರುವುದು ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಭ್ರಷ್ಟಾಚಾರ ಮಾಡಿದ್ದ ನಾಗೇಂದ್ರ ಅವರು ಈ ಹಿಂದೆ ರಾಜೀನಾಮೆ ನೀಡಿದ್ದರು ಎಂದು ತಿಳಿಸಿದರು.
ನಾಗೇಂದ್ರ ಅವರಿಗೆ ಸರ್ಕಾರವಾಗಲಿ ಅಥವಾ ನ್ಯಾಯಾಲಯವಾಗಲಿ ಕ್ಲೀನ್ ಚಿಟ್ ನೀಡಿಲ್ಲ. ಅವರ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿದೆ.
ನಾಗೇಂದ್ರ ಅವರು ನಡೆಸಿರುವ ಭ್ರಷ್ಟಾಚಾರ 187 ಕೋಟಿ ರೂ. ಅಲ್ಲ, ಬರೀ 87 ಕೋಟಿ ರೂ.ಗಳದ್ದು ಎಂದು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿಯೇ ಬಹಿರಂಗ ಹೇಳಿಕೆ ನೀಡಿದ್ದರು. ಆದರೂ, ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾಗೇಂದ್ರ ಅವರನ್ನು ತಕ್ಷಣ ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ಒತ್ತಾಯಿಸಿದ ಎನ್. ರವಿಕುಮಾರ, ಇಲ್ಲದಿದ್ದರೆ ಬಿಜೆಪಿಯಿಂದ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಾಗೇಂದ್ರ ಅವರು ಲೂಟಿ ಮಾಡಿರುವ 187 ಕೋಟಿ ರೂ. ಹಣ ಹೈದ್ರಾಬಾದ್ ಚುನಾವಣೆಗೆ ಕಳುಹಿಸಿದ್ದರು. ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಖಾತೆಗೆ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕೆಲವರ ಖಾತೆಗಳಿಗೂ ಹಂಚಿಕೆಯಾಗಿರುವ ಆರೋಪ ಇದೆ ಎಂದು ಹೇಳಿದರು.
ಜಮೀರ್ ಅಹ್ಮದ್ ಅವರ ಆಡಿಯೋ ಅನ್ನು ಕಾಂಗ್ರೆಸ್​ನವರೇ ಬಿಡುಗಡೆಗೊಳಿಸಿದ್ದರು. ಅವರನ್ನು ಯಾವ ಕಾರಣದಿಂದ ಮಂತ್ರಿ ಮಾಡಿದರು ಎಂದು ಪ್ರಶ್ನಿಸಿದರು.
ಸಚಿವ ಸಂತೋಷ ಲಾಡ್ ಅವರು ಈ ಹಿಂದೆ ಕಾರ್ವಿುಕ ಸಚಿವರಾಗಿದ್ದಾಗ ಕಾರ್ವಿುಕರಿಗೆ ನೀಡಿದ್ದ ಕಿಟ್​ನಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. 500 ರಿಂದ 600 ರೂ.ಗಳ ಬೆಲೆಯ ಪ್ರತಿ ಕಿಟ್​ಗೆ 2,600 ರೂ. ಖರ್ಚು ಹಾಕಿ, ಹಣವನ್ನೂ ವರ್ಗಾಯಿಸಿಕೊಂಡಿದ್ದಾರೆ. ಈ ರೀತಿಯ ಅಕ್ರಮ ನಡೆಸಿದ ಲಾಡ್ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಂಡಿದ್ದು ಏಕೆ ? ಎಂದು ಪ್ರಶ್ನೆ ಮಾಡಿದರು.
ಎಐಸಿಸಿ ಪಟ್ಟಿಯಲ್ಲಿ ಇದ್ದ ಗಾಯತ್ರಿ ಶಾಂತೇಗೌಡ ಅವರನ್ನು ಕೊನೆಯ ಗಳಿಗೆಯಲ್ಲಿ ಸಂಪುಟದಿಂದ ಕೈ ಬಿಟ್ಟಿರುವ ಕಾರಣ ಬಹಿರಂಗ ಪಡಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಒತ್ತಾಯಿಸಿದರು.
ನೂತನ ಸಂಪುಟದ ಸಚಿವರ ಪ್ರಮಾಣ ವಚನ ಸಮಾರಂಭ ಮೊದಲು ಮಧ್ಯಾಹ್ನ 4 ಗಂಟೆಗೆ ನಿಗದಿಯಾಗಿತ್ತು. ನಂತರ 5 ಗಂಟೆಗೆ ಮುಂದೂಡಿದ ರಹಸ್ಯ ಏನು ? ಸಚಿವರಾಗುವವರು ಇನ್ನೂ ನಿಗದಿಪಡಿಸಿದ್ದ ಹಣವನ್ನು ಕೊಟ್ಟಿಲ್ಲವೆಂದೇ ? ಎಂದು ಆರೋಪಿಸಿದರು. ಕಾಂಗ್ರೆಸ್​ನವರು ಸಂವಿಧಾನಿಕ ಸ್ಥಾನವಾದ ಸಭಾಪತಿ ಸ್ಥಾನವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಮುಖ್ಯಸಚೇತಕ ಎನ್. ರವಿಕುಮಾರ ಆರೋಪಿಸಿದರು.
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವವರ ಹೆಸರುಗಳನ್ನು ಎಐಸಿಸಿ ಲೆಟರ್​ಹೆಡ್​ನಲ್ಲಿ ಕಳುಹಿಸಲಾಗಿತ್ತು. ಅದರೊಂದಿಗೆ ಸಭಾಪತಿ ಹಾಗೂ ಉಪ ಸಭಾಪತಿಯಾಗಿ ಅಧಿಕಾರ ವಹಿಸಿಕೊಳ್ಳುವವರ ಹೆಸರುಗಳನ್ನು ಸಹ ಎಐಸಿಸಿ ಲೆಟರ್​ಹೆಡ್​ನಲ್ಲಿ ಕಳುಹಿಸಿದ್ದು ಸಂವಿಧಾನ ವಿರೋಧಿಯಾಗಿದೆ ಎಂದು ದೂರಿದರು.
ಸಭಾಪತಿ ಬಸವರಾಜ ಹೊರಟ್ಟಿ ಅವರು ಸತತ 8 ಬಾರಿ ಗೆದ್ದು, ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಸಭಾಪತಿಯಾಗಿರುವ ಅವರನ್ನು ಆ ಹುದ್ದೆಯಿಂದ ಕೆಳಗೆ ಇಳಿಸುವ ಅವಶ್ಯಕತೆಯಾದರೂ ಏನಿದೆ ? ಎಂದು ಪ್ರಶ್ನಿಸಿದರು.
ಒಂದು ವೇಳೆ ಹೊರಟ್ಟಿ ಅವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸಬೇಕಾದರೆ ಆ ಕುರಿತು ಸದನದಲ್ಲಿ ರ್ಚಚಿಸಲಿ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net