ಮಾವು ಅಭಿವೃದ್ಧಿ ಕೇಂದ್ರದ ಇಂಟಿಗ್ರೇಟೇಡ್ ಪ್ಯಾಕ್ ಹೌಸ್ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಪರಿಶೀಲಿಸಿದರು.
Published on:
Copied
Follow Us
ಧಾರವಾಡ: ನಗರ ಹೊರವಲಯದ ಕುಂಭಾಪುರ ಫಾಮ್ರ್ನಲ್ಲಿ ನಿರ್ಮಾಣವಾಗುತ್ತಿರುವ ಮಾವು ಅಭಿವೃದ್ಧಿ ಕೇಂದ್ರದ ಇಂಟಿಗ್ರೇಟೇಡ್ ಪ್ಯಾಕ್ ಹೌಸ್ (ಸಮಗ್ರ ಉಪಚಾರ ಘಟಕ) ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಂಗಳವಾರ ಪರಿಶೀಲಿಸಿದರು.
ಘಟಕದ ಕಟ್ಟಡ ಕಾಮಗಾರಿ ವೀಕ್ಷಿಸಿದ ಅವರು, ಕಟ್ಟಡದ ವಿವರ, ಅಳವಡಿಕೆಯಾಗಲಿರುವ ಯಂತ್ರೋಪಕರಣ ಹಾಗೂ ಅವುಗಳ ಕಾರ್ಯಾಚರಣೆಯ ಮಾಹಿತಿ ಪಡೆದರು. ಅಲ್ಲದೆ, ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಿ, ರೈತರ ಬಳಕೆಗೆ ಅನುಕೂಲ ಕಲ್ಪಿಸಬೇಕು ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ಕಟ್ಟಡದ ಮುಂದಿನ ಆವರಣಕ್ಕೆ ಪೇವರ್ಸ್, ಮೇಲ್ಛಾವಣಿ ಅಳವಡಿಕೆ ಹಾಗೂ ಕಾಂಪೌಂಡ್ ನಿರ್ಮಾಣಕ್ಕೆ ಅಗತ್ಯ ಅನುದಾನಕ್ಕೆ ಕ್ರಿಯಾಯೋಜನೆ ರೂಪಿಸಿ, ಪ್ರಸ್ತಾವನೆ ಸಲ್ಲಿಸಬೇಕು. ಕಟ್ಟಡದ ಎದುರಿನ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಮಾವು ಬೆಳೆಗಾರರ ಬಳಗದ ಗೌರವಾಧ್ಯಕ್ಷ ಡಾ. ರಾಜೇಂದ್ರ ಪೋದ್ದಾರ, ಉಪಾಧ್ಯಕ್ಷ ಪ್ರಮೋದ ಗಾಂವ್ಕರ್ ಅವರು ಮಾವು ಅಭಿವೃದ್ಧಿ ಕೇಂದ್ರಕ್ಕೆ ಇನ್ನಷ್ಟು ಭೂಮಿ ಮತ್ತು ಅನುದಾನ ಒದಗಿಸಬೇಕು. ಧಾರವಾಡದ ಅಲ್ಫಾನ್ಸೋ ಮಾವು ಪ್ರಸಿದ್ಧಿಗೊಳಿಸಲು, ರಫ್ತು ಮಾಡಲು ಹಾಗೂ ಬೆಳೆಗಾರರ ಆಥಿರ್ಕ ಅಭಿವೃದ್ಧಿಗಾಗಿ ಇನ್ನಷ್ಟು ಸೌಕರ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.