`ಮೈಂಡ್‌ವೇವ್ ಎಜು ಹಬ್' ಸಂಸ್ಥೆ ಉದ್ಘಾಟನೆ

mindwave
mindwave
Published on
ಧಾರವಾಡ: ಪ್ರಸ್ತುತ ವಿಜ್ಞಾನ, ತಂತ್ರಜ್ಞಾನ ಮುಂದುವರಿದಿದೆ. ಮಾನವ ಸಂಪನ್ಮೂಲ ಸೇರಿ ಭಾರತದಲ್ಲಿ ಏನೆಲ್ಲ ಸೌಲಭ್ಯಗಳಿವೆ. ಎಲ್ಲ ಸೌಲತ್ತುಗಳನ್ನು ಬಳಸಿಕೊಂಡು ಭಾರತವನ್ನು ಸಶಕ್ತ ಮತ್ತು ಸದೃಢ ದೇಶವನ್ನಾಗಿ ಮಾಡುವುದಕ್ಕೆ ಯಾವ ರೀತಿ ಶಿಕ್ಷಣ ಅಗತ್ಯವಿದೆ ಎನ್ನುವದರ ಬಗ್ಗೆ ಮತ್ತೆ ಚಿಂತನೆಯಾಗಬೇಕಿದೆ ಎಂದು ಭಾರತ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಶಿವರಾಜ ಪಾಟೀಲ ಹೇಳಿದರು.
ಸಾಧನಕೇರಿ ಬೃವಂ ಗಾರ್ಡನ್ ರೆಸ್ಟೋರೆಂಟ್ ಹಿಂಭಾಗದಲ್ಲಿ ಒಂದು ಎಕರೆ ಪ್ರದೇಶದ ಕ್ಯಾಂಪಸ್‌ನಲ್ಲಿ ಶಿಕ್ಷಕರಿಗೆ ಪರಿಣಿತ ಬೋಧನಾ ಕೌಶಲ ತರಬೇತಿ ನೀಡುವ `ಮೈಂಡ್‌ವೇವ್ ಎಜು ಹಬ್' ಸಂಸ್ಥೆ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾತಂತ್ರ‍್ಯ ನಂತರ ಭಾರತದಲ್ಲಿ ಜನಸಂಖ್ಯೆ ಮತ್ತು ಸಾಕ್ಷರತೆ ಪ್ರಮಾಣವೂ ಹೆಚ್ಚಾಗಿದೆ. ವಿಶ್ವವಿದ್ಯಾಲಯ, ಕಾಲೇಜುಗಳ ಸಂಖ್ಯೆ ಹೆಚ್ಚಾಗಿದೆ. ಸಾವಿರಾರು ಶಿಕ್ಷಣ ಸಂಸ್ಥೆಗಳು ತಲೆ ಎತ್ತಿವೆ. ಆದರೆ, ಪ್ರಸ್ತುತ ಯಾವ ರೀತಿ ಶಿಕ್ಷಣ ಅಗತ್ಯವಿದೆ? ಎನ್ನುವುದನ್ನು ಎಲ್ಲರೂ ಅರಿಯಬೇಕಿದೆ. `ಒಬ್ಬ ಶಿಕ್ಷಕ, ಓರ್ವ ವಿದ್ಯಾರ್ಥಿ, ಒಂದು ಪೆನ್ನು' ಸಮಾಜದಲ್ಲಿ ಆಗಾದ ಬದಲಾವಣೆ ತರಬಲ್ಲದು. ಹೀಗಾಗಿ ದೇಶದಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಬೇಕಾಗಿದೆ. ತಂತ್ರಜ್ಞಾನದ ಸದುಪಯೋಗ ಪಡೆದುಕೊಳ್ಳಬೇಕೆ ಹೊರತು ಅದರ ಗುಲಾಮರಾಗಬಾರದು. ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕಾಗಿದೆ. ಶಿಕ್ಷಕರಿಗೆ ಸಮನಾದವರು ಯಾರೂ ಇಲ್ಲ. ಯುವಕರಿಗೆ ಒಳ್ಳೆಯ ಅವಕಾಶಗಳಿವೆ. ಸದುಪಯೋಗ ಪಡಿಸಿಕೊಳ್ಳುವ ಮೂಲಕ ದೇಶವನ್ನು ಕಟ್ಟಬೇಕು ಎಂದರು.
`ಮೈಂಡ್‌ವೇವ್ ಎಜು ಹಬ್' ಸಂಸ್ಥೆ 21ನೇ ಶತಮಾನಕ್ಕೆ ಏನು ಅಗತ್ಯವೋ ಅದನ್ನು ಮಾಡಲು ಮುಂದಾಗಿರುವುದು ಶ್ಲಾಘನೀಯವಾಗಿದೆ. ಈ ಸಂಸ್ಥೆ ಹೊಸ ಬದಲಾವಣೆ ತಂದು ರಾಷ್ಟçಮಟ್ಟದಲ್ಲಿ ಹೆಸರು ಮಾಡಲಿ ಎಂದು ಹಾರೈಸಿದರು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾಜಿ ಅಧ್ಯಕ್ಷ ಡಾ. ಎ.ಎಸ್. ಕಿರಣ್ ಕುಮಾರ್ ಮಾತನಾಡಿ, ಮನುಷ್ಯರು ಪಕ್ಷಿಯಂತೆ ಆಕಾಶದಲ್ಲಿ ಹಾರಾಡುವುದಕ್ಕೆ ವಿಮಾನ ಕಂಡು ಹಿಡಿಯಲಾಯಿತು. ಹೀಗೆ ಅನೇಕ ಆವಿಷ್ಕಾರಗಳು ನಡೆದಿದ್ದು ಮನುಷ್ಯನ ಬುದ್ಧಿ ಶಕ್ತಿಯಿಂದಲೇ. ಈಗ ಕೃತಕ ಬುದ್ಧಿ ಮತ್ತೆ (ಎಐ) ನಾಗಾಲೋಟದಲ್ಲಿ ಮನುಷ್ಯ ಅಸಲಿ ಬುದ್ಧಿಮತ್ತೆಯ ಕ್ಷಮತೆ ಕಳೆದುಕೊಳ್ಳುತ್ತಿದ್ದಾನೆ. ಕಾಲ ಕ್ರಮೇಣ ಮುಂದುವರಿದ ವಿಜ್ಞಾನ ತಂತ್ರಜ್ಞಾನದಿಂದ ಬಹಳ ಬದಲಾವಣೆಗಳು ಆಗಿವೆ. ಆದರೆ, ಇಂದಿನ ತಂತ್ರಜ್ಞಾನ ಜಗತ್ತಿನಲ್ಲಿ ಎಐ ಬಳಕೆ ಎಷ್ಟು ಸೂಕ್ತ? ಅದರಿಂದ ಅನಾಹುತಗಳೇನು? ಎನ್ನುವ ಬಗ್ಗೆ ಅರಿತುಕೊಳ್ಳಬೇಕು. `ಮೈಂಡ್‌ವೇವ್ ಎಜು ಹಬ್' ಸಂಸ್ಥೆಯು ಉತ್ತಮ ದೂರದುಷ್ಟಿ ಹೊಂದಿದೆ ಎಂದರು.
ಪ್ರೊ. ಎಸ್.ಎಂ. ಶಿವಪ್ರಸಾದ ಮಾತನಾಡಿ, ಸಂಸ್ಥೆಯಲ್ಲಿ ನವೀನ ಮಾದರಿಯ ಭೋದನೆ, ವ್ಯಕ್ತಿತ್ವ ವಿಕಸನ ತರಗತಿ, ಡಿಜಿಟಲ್ ಪ್ರಾವಿಣ್ಯತೆಯ ತರಗತಿ, ಸಮಸ್ಯೆಗಳ ನಿವಾರಣೆಯ ಸಂವಾದ ಸೇರಿ ಹಲವಾರು ಉಪಕ್ರಮಗಳ ಕೈಗೊಳ್ಳುತ್ತಿದ್ದೇವೆ. ಸುಸಜ್ಜಿತ ಪ್ರಯೋಗಾಲಯ ಬಳಸಿಕೊಂಡು ಅತ್ಯುತ್ತಮ ವಿಜ್ಞಾನ ಮತ್ತು ಗಣಿತ ಶಿಕ್ಷಕರನ್ನಾಗಿ ರೂಪಿಸುತ್ತೇವೆ ಎಂದರು. ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಮತ್ತು ಡಾ. ಇಂದುಮತಿರಾವ್ ವರ್ಚುವಲ್ ಉಪಸ್ಥಿತಿಯಲ್ಲಿ ಪಾಲ್ಗೊಂಡರು.
ಮಹೇಶ ಮಾಶ್ಯಾಳ, ಸುಭಾಸ ಪಾಟೀಲ, ಉದಯ ಶಂಕರ, ಎಸ್.ವಿ. ಹಿರೇಮಠ ಇತರ ಗಣ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net