Metropolitan city ಮೆಟ್ರೋಪಾಲಿಟಿನ್‌ಗೆ ಒತ್ತು ಕೊಡಿ

ಹುಬ್ಬಳ್ಳಿಯಲ್ಲಿ ಸೋಮವಾರ ಏರ್ಪಡಿಸಿದ್ದ Metropolitan city ಹು-ಧಾ ಮೆಟ್ರೋಪಾಲಿಟಿನ್ ಪರಿಕಲ್ಪನೆ ಕುರಿತ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಮೆಟ್ರೋಪಾಲಿಟಿನ್ ಸಿಟಿ ವೇದಿಕೆ  ಸಹ ಸಂಯೋಜಕ ಸಂತೋಷ ನರಗುಂದ ಮಾತನಾಡಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಏರ್ಪಡಿಸಿದ್ದ Metropolitan city ಹು-ಧಾ ಮೆಟ್ರೋಪಾಲಿಟಿನ್ ಪರಿಕಲ್ಪನೆ ಕುರಿತ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಮೆಟ್ರೋಪಾಲಿಟಿನ್ ಸಿಟಿ ವೇದಿಕೆ ಸಹ ಸಂಯೋಜಕ ಸಂತೋಷ ನರಗುಂದ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಹುಬ್ಬಳ್ಳಿ-ಧಾರವಾಡ ಮೆಟ್ರೋಪಾಲಿಟಿನ್ ಪರಿಕಲ್ಪನೆ ಕುರಿತ ಸಾರ್ವಜನಿಕ ಸಂವಾದ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಯ ಅಗತ್ಯವಿಲ್ಲ. ಅಭಿವೃದ್ಧಿಯ ದೂರ ದೃಷ್ಟಿಕೋನ ಹೊಂದಿರುವ ಸಂಘಟಿತ ಮಹಾನಗರ ಪಾಲಿಕೆಯ ಅಗತ್ಯವಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾದವು.

ಹುಬ್ಬಳ್ಳಿ-ಧಾರವಾಡ ಮೆಟ್ರೋಪಾಲಿಟಿನ್ ಸಿಟಿ ವೇದಿಕೆ ವತಿಯಿಂದ ಇಲ್ಲಿಯ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಹುಬ್ಬಳ್ಳಿ-ಧಾರವಾಡ ಮೆಟ್ರೋಪಾಲಿಟಿನ್ ಪರಿಕಲ್ಪನೆ ಕುರಿತ ಸಾರ್ವಜನಿಕ ಸಂವಾದದಲ್ಲಿ ಈ ಮಾತುಗಳು ಹೊರಹೊಮ್ಮಿದವು.
ಪ್ರತ್ಯೇಕತೆಯಲ್ಲಿ ರಾಜಕೀಯ ಉದ್ದೇಶವಿದೆಯೇ ಹೊರತು, ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಸ್ಮಾರ್ಟ್‌ಸಿಟಿ ಅನುದಾನ ಹಂಚಿಕೆ ತಾರತಮ್ಯ, ಕೈಗಾರಿಕಾ ವಲಯ ಧಾರವಾಡಕ್ಕೆ ಸಿಕ್ಕಿಲ್ಲ ಎಂಬ ಕೋಪದ ಮಾತುಗಳೇ ಇಲ್ಲಿ ಮೇಳೈಸಿವೆ. ಬೆಂಗಳೂರು ನಂತರದ ಸಿಟಿಯಾಗಿ ಹುಬ್ಬಳ್ಳಿ-ಧಾರವಾಡ ಬೆಳೆಯಬೇಕು ಎಂದರೆ ಪ್ರತ್ಯೇಕ ಮಾತುಗಳು ಮೌನವಾಗಬೇಕು ಎಂಬ ಮುಂದಾಲೋಚನೆಯ ನುಡಿಗಳು ಸಂವಾದದಲ್ಲಿ ಹೊರ ಬಂದವು.
ವೇದಿಕೆ ಸಹ ಸಂಯೋಜಕ ಸಂತೋಷ ನರಗುಂದ ಪ್ರಾಜೆಕ್ಟರ್ ಮೂಲಕ ವಿವರಿಸುತ್ತ, ದೇಶದಲ್ಲಿ 46 ಮಹಾನಗರಗಳಿವೆ. ಮೆಟ್ರೋಪಾಲಿಟಿನ್ ಸಿಟಿಯಾಗಬೇಕೆಂದರೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಹಂತ ಹಂತವಾಗಿ ಮೂಲ ಸೌಕರ್ಯಗಳನ್ನು ಹೊಂದಬೇಕು. ಜನಸಂಖ್ಯೆ ಆಧಾರಿತವಾಗಿ ಈ ಸ್ಥಾನಮಾನ ಹೊಂದುವ ಸಾಮರ್ಥ್ಯವಿದೆ. ಸಾಮಾಜಿಕ-ಆರ್ಥಿಕ ಕಾರಿಡಾರ್ ಸ್ಥಾಪನೆಗೂ ಆದ್ಯತೆ ಸಿಗಬೇಕು ಎಂದು ಅಭಿಪ್ರಾಯ ಮಂಡಿಸಿದರು.
ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಬಾರದು. ತಜ್ಞರ ತಂಡವನ್ನೊಳಗೊಂಡ ಸಮಿತಿ ರಚಿಸಿ, ಸಮಗ್ರ ಅಭಿವೃದ್ಧಿ ಕುರಿತು ಅಧ್ಯಯನ ಮಾಡಬೇಕು. ಈ ಕುರಿತು ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಲಾಗುವುದು ಎಂದರು.
ವಿಕಾಸ ಸೊಪ್ಪಿನ ಮಾತನಾಡಿ, ನಗರಾಭಿವೃದ್ಧಿ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಈ ವಿಷಯವನ್ನು ಮನವರಿಕೆ ಮಾಡಿಕೊಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ಗಮನ ಸೆಳೆಯುವ ಕೆಲಸ ಮಾಡೋಣ ಎಂದರು.
ಮಾಜಿ ಮೇಯರ್ ಹನುಮಂತ ಡಂಬಳ, ಉದ್ಯಮಿಗಳಾದ ಎಂ.ವಿ. ಕರಮರಿ, ಜಗದೀಶ ಹಿರೇಮಠ, ಪ್ರಕಾಶ ಪಾಟೀಲ ಸೇರಿ ಇತರರು ಮಾತನಾಡಿ, ಭಾವನಾತ್ಮಕ ಮತ್ತು ತಾಂತ್ರಿಕವಾಗಿ ಪ್ರತ್ಯೇಕ ಮಹಾನಗರ ಪಾಲಿಕೆಯ ಅಗತ್ಯವಿಲ್ಲ. ದೂರದೃಷ್ಟಿ ಹೊಂದಿರುವ ಅಭಿವೃದ್ಧಿಗೆ ಆದ್ಯತೆ ನೀಡುವ ಮಹಾನಗರ ಪಾಲಿಕೆ ಬೇಕು. ಅದರಲ್ಲೂ ಮೆಟ್ರೋಪಾಲಿಟಿನ್ ಸಿಟಿ ತರಬೇಕೆಂಬ ಕನಸು ಒಗ್ಗೂಡಬೇಕು. ಜನರಲ್ಲಿಯೂ ಈ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದರು.
ಸಂಯೋಜಕ ಅರುಣ ಚರಂತಿಮಠ, ಸಹ ಸಂಯೋಜಕರಾದ ಕಿರಣ ಸಾಂಬ್ರಾಣಿ, ಲಿಂಗರಾಜ ಧಾರವಾಡಶೆಟ್ಟರ್, ಪೌರಕಾರ್ಮಿಕರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ, ಇತರರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net