ಮಹದಾಯಿಗಾಗಿ 19ರಂದು ಪಾಲಿಕೆ ಸದಸ್ಯರ ಸಭೆ

ರೈತ ಸೇನಾ ವತಿಯಿಂದ ಆಯೋಜನೆ
ರೈತ ಸೇನಾ ಕರ್ನಾಟಕ ಅಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿದರು. ಗುರು ರಾಯನಗೌಡ್ರ, ವೀರುಪಾಕ್ಷಪ್ಪ ಪಾಯಣ್ಣವರ, ಮಲ್ಲಣ್ಣ ಆಲೇಕರ ಗೋಷ್ಠಿಯಲ್ಲಿದ್ದರು.
ರೈತ ಸೇನಾ ಕರ್ನಾಟಕ ಅಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿದರು. ಗುರು ರಾಯನಗೌಡ್ರ, ವೀರುಪಾಕ್ಷಪ್ಪ ಪಾಯಣ್ಣವರ, ಮಲ್ಲಣ್ಣ ಆಲೇಕರ ಗೋಷ್ಠಿಯಲ್ಲಿದ್ದರು.
Published on: 

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಸಂಬಂಧಿಸಿದ ಅಧಿಕಾರಿಗಳು, ರೈತರು ಸೇರಿ ಮಹದಾಯಿ ಯೋಜನೆ ಜಾರಿ ಸಮಸ್ಯೆ ಕುರಿತು ಚಚಿರ್ಸಲು ನ. 19ರಂದು ಬೆಳಗ್ಗೆ 11ಕ್ಕೆ ಸವಾಯಿ ಗಂಧರ್ವ ಹಾಲ್​ನಲ್ಲಿ ಸಭೆ ಆಯೋಜಿಸಲಾಗಿದೆ ಎಂದು ರೈತ ಸೇನಾ ಕರ್ನಾಟಕ ಅಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲಪ್ರಭಾ ಜಲಾಶಯದಿಂದ ಹುಬ್ಬಳ್ಳಿ ಧಾರವಾಡಕ್ಕೆ ಎಷ್ಟು ವರ್ಷದಿಂದ ನೀರು ಪಡೆಯಲಾಗುತ್ತಿದೆ, ಇಲ್ಲಿಯವರೆಗೆ ಎಷ್ಟು ಟಿಎಂಸಿ ಅಡಿ ನೀರು ಬಳಸಲಾಗಿದೆ, ಇದುವರೆಗೆ ಸಂಗ್ರಹವಾದ ತೆರಿಗೆ ಎಷ್ಟು, ಕೈಗಾರಿಕೆಗಳಿಗೆ ನೀಡಿರುವ ನೀರಿನಿಂದ ಶುಲ್ಕ ಎಷ್ಟು ಬಂದಿದೆ ಎಂಬಿತ್ಯಾದಿ ಮಾಹಿತಿಯೊಂದಿಗೆ ಅಧಿಕಾರಿಗಳು ಸಭೆಗೆ ಬರಲು ವಿನಂತಿಸಿದರು.

1961- 63ರಲ್ಲಿ ಮಲಪ್ರಭಾ ಜಲಾಶಯ ನಿರ್ಮಾಣವಾಗಿದೆ. ಅಂದು 20 ಕೋಟಿ ರೂ. ಡಿಪಿಆರ್​ನಲ್ಲಿ ಕೇವಲ ಕೃಷಿಗಾಗಿ ನೀರು ಬಳಸುವ ಪ್ರಸ್ತಾಪ ಮಾಡಲಾಗಿದೆ. ಇದೀಗ ಅವಳಿನಗರಕ್ಕೆ ಕಾನೂನು ಬಾಹಿರವಾಗಿ ನೀರು ಪಡೆಯಲಾಗುತ್ತಿದೆ. ಕುಡಿಯಲು ನೀರು ಬಳಸುವುದಕ್ಕೆ ರೈತರು ವಿರೋಧವಿಲ್ಲ. ಆದರೆ, ಮಹದಾಯಿ ನೀರಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಮಹಾನಗರ ಪಾಲಿಕೆ ಎಷ್ಟರ ಮಟ್ಟಿಗೆ ತೊಡಗಿಸಿಕೊಂಡಿದೆ ಎಂಬುದು ಪ್ರಶ್ನಾರ್ಹವಾಗಿದೆ ಎಂದು ಖೇದ ವ್ಯಕ್ತಪಡಿಸಿದರು.

ಇದಕ್ಕಾಗಿ ಸಭೆಯಲ್ಲಿ ಪ್ರಮುಖ ನಿರ್ಣಯ ಕೈಗೊಳ್ಳಲಾಗುತ್ತಿದ್ದು, ಎಲ್ಲರೂ ಪಾಲ್ಗೊಂಡು ಉದ್ಭವಿಸಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಮನವಿ ಮಾಡಿದರು.

ಕೃಷಿಗಾಗಿ ಇಟ್ಟಿರುವ ನೀರನ್ನು ಕೃಷಿ ಬಳಕೆಗೆ ಬಿಟ್ಟು, ಕಳಸಾ ಬಂಡೂರಿ ನಾಲೆಯಿಂದ ಬರುವ 3.56 ಟಿಎಂಸಿ ನೀರನ್ನು ಕುಡಿಯಲು ಬಳಸಬೇಕು. ಈ ನೀರು ಪಡೆಯಲು ನಡೆದಿರುವ ಹೋರಾಟಕ್ಕೆ ವೇಗ ಹಾಗೂ ಶಕ್ತಿ ತುಂಬಬೇಕು ಎಂದು ಕೋರಿದರು.

ರಾಜ್ಯದ ಜಲ ವಿವಾದಗಳಿಗಾಗಿ ನೇಮಕವಾಗಿರುವ ವಕೀಲರ ಮಂಡಳಿಯು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕೇವಲ ತಮಗೆ ಬರಬೇಕಾದ ಹಣದ ಬಗ್ಗೆ ಅವರಿಗೆ ಕಾಳಜಿ ಇದೆ. ರಾಜ್ಯದ ಜನರು ಬರಗಾಲದಿಂದ ಕಂಗೆಟ್ಟಿರುವುದು ಅವರಿಗೆ ಕಾಣುತ್ತಿಲ್ಲ. ಹಾಗಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಮಂಡಳಿಗೆ ಹೊಸ ವಕೀಲರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.

ರೈತ ಸೇನಾ ವಕ್ತಾರ ಗುರು ರಾಯನಗೌಡ್ರ, ರಾಜ್ಯ ಸಮಿತಿ ಸದಸ್ಯ ವೀರುಪಾಕ್ಷಪ್ಪ ಪಾಯಣ್ಣವರ, ಉಪಾಧ್ಯಕ್ಷ ಮಲ್ಲಣ್ಣ ಆಲೇಕರ ಗೋಷ್ಠಿಯಲ್ಲಿದ್ದರು.