ಹುಬ್ಬಳ್ಳಿ : ಸಕ್ಕರೆ ಕಾರ್ಖಾನೆಗಳಿಗೆ ಅತಿಯಾದ ಲಾಭವಾಗಬಾರದು, ರೈತರಿಗೆ ನಷ್ಟವಾಗಬಾರದು ಮತ್ತು ಗ್ರಾಹಕರಿಗೆ ಸಕ್ಕರೆ ಖರೀದಿಯಲ್ಲಿ ತೊಂದರೆಯಾಗಬಾರದು. ಈ ಮೂರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೈತರ ಮತ್ತು ಗ್ರಾಹಕರ ಹಿತಾಸಕ್ತಿಯನ್ನು ಸಮತೋಲನದಲ್ಲಿ ಕಾಯ್ದುಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ ಎಂದರು.
ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ರೈತರ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಪರಿಶೀಲಿಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ.
ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಪರಿಶೀಲಿಸಲು ತಜ್ಞರನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಸಮಿತಿಯು ರೈತರ ಸಮಸ್ಯೆಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಶೀಘ್ರ ಶಿಫಾರಸುಗಳನ್ನು ಸಲ್ಲಿಸಲಿದೆ. ವರದಿಯ ಆಧಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಬ್ಬಿನ ಬೆಲೆ ಹೆಚ್ಚಳ ಸೇರಿದಂತೆ ರೈತರ ಬೇಡಿಕೆಗಳನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ. ಕೃಷಿಯು ದೇಶದ ಆರ್ಥಿಕತೆಯ ಪ್ರಮುಖ ಭಾಗವಾಗಿದ್ದು, ರೈತರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಅರಿವಿದೆ ಎಂದು ತಿಳಿಸಿದರು.
ಭತ್ತ ಮತ್ತು ಗೋಧಿ ಬೆಳೆಗಳ ಖರೀದಿಯಲ್ಲಿ ರೈತರು ಬೆಳೆದ ಪ್ರಮಾಣಕ್ಕೆ ಅನುಗುಣವಾಗಿ ಖರೀದಿಸಲು ಪ್ರಯತ್ನಿಸಲಾಗುತ್ತಿದೆ. ಇದರಿಂದ ಸಂಗ್ರಹಣೆೆಯ ಸಮಸ್ಯೆ ಎದುರಾದರೂ ಖರೀದಿ ಪ್ರಕ್ರಿಯೆ ಮುಂದುವರಿಸಲಾಗುತ್ತಿದೆ ಎಂದು ಹೇಳಿದರು.
ಎಥೆನಾಲ್ ಖರೀದಿ ನೀತಿಯು ಕಬ್ಬು ಬೆಳೆಗಾರರಿಗೆ ಪರೋಕ್ಷವಾಗಿ ನೆರವಾಗಿದೆ. 2014ಕ್ಕೂ ಮೊದಲು ಎಥೆನಾಲ್ ಖರೀದಿ ಪ್ರಮಾಣ ಕಡಿಮೆ ಇತ್ತು. ಈಗ ದೇಶದಲ್ಲಿ ಖರೀದಿ ಪ್ರಮಾಣ ಗಣನೀಯವಾಗಿ ಹೆಚ್ಚಿದ್ದು, ಕರ್ನಾಟಕದಿಂದಲೂ ಸುಮಾರು 165 ಕೋಟಿ ಲೀಟರ್ ಎಥೆನಾಲ್ ಖರೀದಿಸಲಾಗುತ್ತಿದೆ ಎಂದು ತಿಳಿಸಿದರು.
ಸಕ್ಕರೆ ಬೆಲೆ ಕುಸಿದಾಗ ಹೆಚ್ಚುವರಿ ಕಬ್ಬನ್ನು ಎಥೆನಾಲ್ ಉತ್ಪಾದನೆಗೆ ಬಳಸುವುದು ಹಾಗೂ ರಫ್ತು ನೀತಿಯ ಮೂಲಕ ಸಕ್ಕರೆ ಕಾರ್ಖಾನೆಗಳು ಮತ್ತು ರೈತರ ನಷ್ಟವನ್ನು ತಗ್ಗಿಸಲು ಪ್ರಯತ್ನಿಸಲಾಗುತ್ತಿದೆ. ಎಥೆನಾಲ್ ಉತ್ಪಾದನೆಗೆ ಸ್ಥಿರವಾದ ನೀತಿ ರೂಪಿಸಿರುವುದರಿಂದ ಕಬ್ಬಿನ ಬೆಲೆ ಕುಸಿತವನ್ನು ನಿಯಂತ್ರಿಸಲು ಸಾಧ್ಯವಾಗಿದೆ ಎಂದರು.
ಸಕ್ಕರೆ ಕಾರ್ಖಾನೆಗಳು ನಷ್ಟ ಅನುಭವಿಸಬಾರದೆಂಬ ಕಾರಣಕ್ಕೆ ಕನಿಷ್ಠ ಮಾರಾಟ ಬೆಲೆ (ಎಂಎಸ್ಪಿ) ನಿಗದಿಪಡಿಸಲಾಗಿದೆ. ಸದ್ಯ ಂಎಸ್ಪಿ ಪ್ರತಿ ಕೆಜಿಗೆ 31 ರೂ ಇದ್ದು, ಅದಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾಗದಂತೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ನಿರ್ವಹಿಸಲಿ: ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಲ್ಲಿ ರಾಜ್ಯ ಸರ್ಕಾರವೂ ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಸಚಿವ ಜೋಶಿ ಒತ್ತಾಯಿಸಿದರು.
ಕಬ್ಬಿನ ಬೆಲೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ಮುಖ್ಯಮಂತ್ರಿ ಅವರೊಂದಿಗೆ ಈ ಕುರಿತು ರ್ಚಚಿಸಿದ್ದು, ರೈತರ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕಿದೆ ಎಂದರು.